
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆದಿದೆ . ಕಳೆದ ವಿಚಾರಣೆ ವೇಳೆ, ಆರೋಪಿಗಳಲ್ಲಿ ಒಬ್ಬರಾದ ಪವನ್ (ಎ3) ಪರ ವಕೀಲರು, ತನಿಖಾಧಿಕಾರಿಗಳ ವಿರುದ್ಧ ಆರೋಪಗಳನ್ನು ಮಂಡಿಸಿದ್ದು, ಎಸಿಪಿ ಚಂದನ್ ಅವರನ್ನು ಕೂಡ ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸಬೇಕು ಎಂದು ವಾದಿಸಿದ್ದರು.
ಆದರೆ ನ್ಯಾಯಾಲಯವು ವಕೀಲರ ಅರ್ಜಿಯನ್ನು ತಿರಸ್ಕರಿಸಿ, ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದಕ್ಕಾಗಿ ಪವನ್ ಪರ ವಕೀಲರಿಗೆ 5,000 ರೂಪಾಯಿ ದಂಡ ವಿಧಿಸಿದೆ. ಈ ಹಣವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಆರೋಪಿಗಳ ಮೊಬೈಲ್ ವಶಕ್ಕೆ ಪಡೆಯುವ ವೇಳೆ ಪೋಲಿಸರು ತೆಗೆದುಕೊಂಡ ಫೋಟೋದಲ್ಲಿನ ಟೈಲ್ಸ್ ಬಣ್ಣವನ್ನು ಉಲ್ಲೇಖಿಸಿ ಸುಳ್ಳು ಸಾಕ್ಷ್ಯ ಸೃಷ್ಟಿ, ಸಾಕ್ಷ್ಯ ತಿದ್ದುಪಡಿ ಆರೋಪಗಳನ್ನು ವಕೀಲರು ಮಾಡಿದ್ದರು.

ನ್ಯಾಯಾಲಯವು ಆರೋಪಿ ದರ್ಶನ್ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅರ್ಜಿ ಸಲ್ಲಿಸಿರುವುದನ್ನು ಸ್ವೀಕರಿಸಿದೆ. ಇದಕ್ಕೆ ಅನುಸಾರವಾಗಿ, ಜೈಲು ನಿಯಮಗಳಂತೆ ಕುಟುಂಬ ಮತ್ತು ಸ್ನೇಹಿತರ ಭೇಟಿ ನಿಗದಿತ ರೀತಿಯಲ್ಲಿ ಅನುಮತಿಸಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣವು ಎರಡು ವರ್ಷಗಳಿಂದ ನ್ಯಾಯಾಂಗ ಪ್ರಕ್ರಿಯೆಯಲ್ಲಿದೆ. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಬಂಧಿತರಾಗಿದ್ದಾರೆ. ದರ್ಶನ್ ಜಾಮೀನು ಮೇಲೆ ಬಿಡುಗಡೆಯಾದರೂ, ಸುಪ್ರೀಂಕೋರ್ಟ್ ಮತ್ತೆ ನ್ಯಾಯಾಂಗ ಬಂಧನ ವಿಧಿಸಿದೆ.




