ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ; ಬನಶಂಕರಿ ಬಸ್ ನಿಲ್ದಾಣದಲ್ಲಿ ಘಟನೆ!

ಬೆಂಗಳೂರು: ಬನಶಂಕರಿ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಇವಿ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಮುಬೀನ್ ತಾಜ್ ಎಂಬ ಮಹಿಳೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಸ್‌ಗಾಗಿ ಕಾಯುತ್ತಾ ನಿಂತಿದ್ದ ಇವರ ಕಾಲಿನ ಮೇಲೆ ಚಾಲಕನ ನಿರ್ಲಕ್ಷ್ಯದಿಂದ ಬಸ್ ಹರಿದಿತ್ತು. ಅಪಘಾತದ ತೀವ್ರತೆಗೆ ಕಾಲು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದರಿಂದ ಅವರನ್ನು ತಕ್ಷಣ ಐಸಿಯುಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಚಾಲಕನ ಅತಿವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಕುಟುಂಬಸ್ಥರು ದೂರಿದ್ದಾರೆ. ನಗರದಲ್ಲಿ ಬಿಎಂಟಿಸಿ ಬಸ್‌ಗಳ ಸರಣಿ ಅಪಘಾತಗಳು ವರದಿಯಾಗುತ್ತಲೇ ಇದ್ದು, ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶ ಹೆಚ್ಚಾಗಿದೆ. ಚಾಲಕರ ಬೇಜವಾಬ್ದಾರಿತನಕ್ಕೆ ಕಡಿವಾಣ ಹಾಕಬೇಕೆಂದು ಪ್ರಯಾಣಿಕರು ಸಾರಿಗೆ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ.
ಸಾರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ಬಿಎಂಟಿಸಿ ಬಸ್‌ಗಳ ಅಪಘಾತದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಳವಳಕಾರಿಯಾಗಿ ಹೆಚ್ಚುತ್ತಿದೆ. 2024ರಲ್ಲಿ 42 ಮಂದಿ ಹಾಗೂ 2025ರಲ್ಲಿ 38 ಮಂದಿ ಬಲಿಯಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಒಟ್ಟು 1,097 ಅಪಘಾತಗಳು ಸಂಭವಿಸಿದ್ದು, ಬಿಎಂಟಿಸಿಯ ಸುರಕ್ಷತಾ ಕ್ರಮಗಳ ಮೇಲೆ ಸಾರ್ವಜನಿಕರು ಈಗ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿಯನ್ನು ‘ಕಿಲ್ಲರ್ ಬಿಎಂಟಿಸಿ’ ಎಂದು ಸಾರ್ವಜನಿಕರು ಕರೆಯಲಾರಂಭಿಸಿದ್ದಾರೆ.




