
ದಕ್ಷಿಣ ಕನ್ನಡ: ಸಸಿಹಿತ್ಲು ಸಮುದ್ರ ಕಿನಾರೆಯಲ್ಲಿ ಕಾಶಿಯ ಗಂಗಾರತಿಯ ವೈಭವ ಮರುಕಳಿಸಿದ್ದು, ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಈ ಧಾರ್ಮಿಕ ಕಾರ್ಯಕ್ರಮವು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದೆ. ಉತ್ತರ ಭಾರತದ ಪುಣ್ಯಕ್ಷೇತ್ರಗಳಲ್ಲಿ ಗಂಗಾರತಿ ವೀಕ್ಷಿಸಬೇಕು ಎಂಬ ಕನಸು ಹೊತ್ತಿದ್ದ ಸಾವಿರಾರು ಜನರಿಗೆ, ಶ್ರೀ ಭಗವತಿ ದೇವಸ್ಥಾನದ ಸನಿಹದ ಬೀಚ್‌ನಲ್ಲಿ ಅದೇ ಮಾದರಿಯ ಗಂಗಾರತಿ ವೀಕ್ಷಿಸುವ ಅಪರೂಪದ ಅವಕಾಶ ಲಭಿಸಿತು. ಕಡಲ ತೀರದಲ್ಲಿ ವೇದ ಘೋಷಗಳ ನಿನಾದದೊಂದಿಗೆ ನಡೆದ ಈ ದೃಶ್ಯವು ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಿತು.
ಉತ್ತರ ಭಾರತದಿಂದ ಹತ್ತು ಮಂದಿ ಪರಿಣಿತ ಅರ್ಚಕರ ತಂಡ ಆಗಮಿಸಿತ್ತು. ಸಮುದ್ರ ದಂಡೆಯ ಮೇಲೆ ಹತ್ತು ಪ್ರತ್ಯೇಕ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಸಂಜೆಯ ಹೊತ್ತಿಗೆ ಆರಂಭವಾದ ಆರತಿಯು ಸುಮಾರು ಎರಡು ಗಂಟೆಗಳ ಕಾಲ ಸತತವಾಗಿ ನಡೆಯಿತು. ಜೀವನೋಪಾಯಕ್ಕಾಗಿ ಸಮುದ್ರವನ್ನೇ ನಂಬಿರುವ ಮೊಗವೀರರು ಮತ್ತು ಕರಾವಳಿಯ ಭಕ್ತರು, ಮಾತೃ ಸ್ವರೂಪಿಣಿಯಾದ ಕಡಲಿಗೆ ಪೂಜೆ ಸಲ್ಲಿಸುವ ಮೂಲಕ ಧನ್ಯತಾ ಭಾವ ಅನುಭವಿಸಿದರು.
ಉತ್ತರ ಭಾರತದ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಈ ಗಂಗಾರತಿಯನ್ನು ಕಣ್ತುಂಬಿಕೊಳ್ಳಲು ಬೀಚ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಕಾಶಿಯ ಗಂಗಾ ತಟದಲ್ಲಿ ನಡೆಯುವ ಪೂಜೆಯಂತೆಯೇ ಇಲ್ಲಿಯೂ ದೀಪಗಳ ಅಲಂಕಾರ ಮತ್ತು ಶಿಸ್ತಿನ ಆಚರಣೆಗಳು ನೋಡುಗರ ಗಮನ ಸೆಳೆದವು.




