ಜಿಲ್ಲೆಸುದ್ದಿ

ಬೆಂಗಳೂರಿನ ಮದ್ಯಪ್ರಿಯರಿಗೆ ಶಾಕ್;ಎರಡು ದಿನ ಮದ್ಯ ಮಾರಾಟ ನಿಷೇಧ!

ಬೆಂಗಳೂರು: ಮಧ್ಯಪ್ರಾಚ್ಯದ ಇರಾನ್-ಇಸ್ರೇಲ್ ಯುದ್ಧದ ಬಿಕ್ಕಟ್ಟು ಮತ್ತು ಅಡುಗೆ ಅನಿಲದ ಅಭಾವದಿಂದ ಕಂಗಾಲಾಗಿರುವ ಜನರಿಗೆ, ಇದೀಗ ರಾಜಧಾನಿಯ ಮದ್ಯಪ್ರಿಯರಿಗೂ ಒಂದು ಶಾಕಿಂಗ್ ಸುದ್ದಿ ಎದುರಾಗಿದೆ. ಹುಸ್ಕೂರು ಮದ್ದೂರಮ್ಮ ಜಾತ್ರೆ ಹಾಗೂ ಧರ್ಮರಾಯ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಕೆಲವು ಭಾಗಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಹೊರಡಿಸಿರುವ ಆದೇಶದಂತೆ, ಪರಪ್ಪನ ಅಗ್ರಹಾರ ಹಾಗೂ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಬಂದ್ ಮಾಡಲಾಗಿದೆ. ಮಾರ್ಚ್ 14ರ ಬೆಳಿಗ್ಗೆ 6 ಗಂಟೆಯಿಂದ ಮಾರ್ಚ್ 15ರ ರಾತ್ರಿ 11 ಗಂಟೆಯವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ. ಜಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಈ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದೆ.

ಈ ನಿಷೇಧವು ಕ್ಲಬ್‌ಗಳು ಮತ್ತು ಸ್ಟಾರ್ ಹೋಟೆಲ್‌ಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಅನ್ವಯಿಸಲಿದೆ. ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಈ ವೇಳೆ ಮದ್ಯಪಾನ ಮಾಡಿ ಗಲಾಟೆ ಮಾಡುವವರ ಮೇಲೆ ನಿಗಾ ಇಡಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಿಯಮ ಮೀರಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

Comments (0)

Your email address will not be published. Required fields are marked *

Back to top button