
ನೆಲಮಂಗಲ: ಬ್ಯಾಡರಹಳ್ಳಿಯಲ್ಲಿ ಅಣ್ಣಯ್ಯ ಮತ್ತು ಋತು ದಂಪತಿ ತಮ್ಮ ಎರಡೂವರೆ ವರ್ಷದ ಮುದ್ದಾದ ಮಗ ಚಿರಾಗ್ ಜೊತೆ ಸುಖವಾಗಿದ್ದರು. ಅಂದು ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಸಂಬಂಧಿಕರ ಮದುವೆಗೆ ತೆರಳಲು ದಂಪತಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಅಣ್ಣಯ್ಯ ಅವರು ಮದುವೆಗೆ ಹೋಗಲು ಕಾರನ್ನು ಸ್ವಚ್ಛಗೊಳಿಸಲು ಮುಂದಾಗಿದ್ದರು. ಕಾರು ತೊಳೆಯಲು ನೀರು ಬೇಕೆಂದು ಸಂಪ್ನ ಮುಚ್ಚಳವನ್ನು ತೆರೆದಿದ್ದರು. ನೀರು ಹಿಡಿದ ನಂತರ, ಯಾವುದೋ ಕೆಲಸಕ್ಕೆಂದು ಅಥವಾ ವಸ್ತು ತರಲೆಂದು ಮುಚ್ಚಳವನ್ನು ಹಾಗೆಯೇ ಬಿಟ್ಟು ಕ್ಷಣಕಾಲ ಮನೆಯೊಳಗೆ ತೆರಳಿದ್ದರು.

ಇದೇ ಸಮಯದಲ್ಲಿ ಅಂಗಳದಲ್ಲಿ ಆಟವಾಡುತ್ತಿದ್ದ ಪುಟ್ಟ ಚಿರಾಗ್, ತೆರೆದಿದ್ದ ಸಂಪ್ನ ಬಳಿ ಬಂದಿದ್ದಾನೆ. ಆಳವಾದ ಗುಂಡಿಯಲ್ಲಿ ನೀರಿರುವುದನ್ನು ಕಂಡು ಕುತೂಹಲದಿಂದ ಇಣುಕಿದನೋ ಅಥವಾ ಆಕಸ್ಮಿಕವಾಗಿ ಕಾಲು ಜಾರಿತೋ ತಿಳಿಯದು, ಆ ಮಗು ನೇರವಾಗಿ ಸಂಪ್ನೊಳಗೆ ಬಿದ್ದಿದ್ದಾನೆ.
ಮನೆಯಿಂದ ಹೊರಬಂದ ಪೋಷಕರಿಗೆ ಮಗು ಕಾಣಿಸದಿದ್ದಾಗ ಗಾಬರಿಯಾಗಿದೆ. ಅತ್ತಿತ್ತ ಹುಡುಕಾಡಿದಾಗ ಸಂಪ್ನೊಳಗೆ ಮಗು ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮಗುವನ್ನು ಹೊರತೆಗೆದರೂ ಅಷ್ಟರಲ್ಲೇ ಆ ಪುಟ್ಟ ಜೀವ ಈ ಲೋಕವನ್ನು ಬಿಟ್ಟು ಹೋಗಿತ್ತು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ತಂದೆ ಮಾಡಿದ ಒಂದು ಸಣ್ಣ ಅಚಾತುರ್ಯ, ಒಂದು ಕುಟುಂಬದ ಕಣ್ಣಮಣಿಯನ್ನೇ ಕಿತ್ತುಕೊಂಡಿದೆ.ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




