Top Newsರಾಜಕೀಯರಾಜ್ಯಸುದ್ದಿ

ಸಿಎಂ ಕುರ್ಚಿ ಕದನ; ಶಾಸಕರ ಪಟ್ಟಿಯೊಂದಿಗೆ ದೆಹಲಿಗೆ ಹಾರಿದ ಡಿ.ಕೆ. ಶಿವಕುಮಾರ್!

ಕರ್ನಾಟಕ ರಾಜಕಾರಣದ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ವೇದಿಕೆ ಸಿದ್ಧವಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಬಾರಿ ಸಿಎಂ ಕುರ್ಚಿ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ತಮ್ಮ ಬೆಂಬಲಕ್ಕಿರುವ ಶಾಸಕರ ಪಕ್ಕಾ ಪಟ್ಟಿಯೊಂದಿಗೆ ದೆಹಲಿ ತಲುಪಿರುವ ಅವರು, ಹೈಕಮಾಂಡ್ ನಾಯಕರ ಮುಂದೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. “ಈ ಬಾರಿ ಸಿಎಂ ಸ್ಥಾನ ನೀಡದಿದ್ದರೆ ನನ್ನ ಹಾದಿ ನನಗೆ” ಎಂಬ ಖಡಕ್ ಸಂದೇಶವನ್ನು ರವಾನಿಸಿರುವ ಡಿ.ಕೆ.ಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗ ಸಮರಕ್ಕೆ ಅಣಿಯಾಗಿದ್ದಾರೆ.

ಸದ್ಯ ಕಾಂಗ್ರೆಸ್ ಹೈಕಮಾಂಡ್ ದೆಹಲಿಯ ಅಂಗಳದಲ್ಲಿ ಧರ್ಮಸಂಕಟಕ್ಕೆ ಸಿಲುಕಿದೆ. ಒಂದು ಕಡೆ ಸಿದ್ದರಾಮಯ್ಯ ಅವರು ತಾವೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಹಂಚಿಕೆಯ ಸೂತ್ರದಂತೆ ಇನ್ನು ಮುಂದೆ ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಇಬ್ಬರು ಪ್ರಭಾವಿ ನಾಯಕರಲ್ಲಿ ಯಾರನ್ನು ಒಪ್ಪಿಸಬೇಕು ಮತ್ತು ಯಾರನ್ನು ಕೈಬಿಡಬೇಕು ಎಂಬ ಗೊಂದಲದಲ್ಲಿ ರಾಷ್ಟ್ರೀಯ ನಾಯಕರು ಸಿಲುಕಿದ್ದಾರೆ.

ಈಗಿನ ಕುರ್ಚಿ ಕದನವು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಈ ಬಾರಿ ಡಿ.ಕೆ. ಶಿವಕುಮಾರ್ ಅವರು ಯಶಸ್ವಿಯಾಗುತ್ತಾರೆಯೇ ಅಥವಾ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ. ವಿಶೇಷವೆಂದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಒಂದೇ ವಿಶೇಷ ವಿಮಾನದಲ್ಲಿ ಡಿ.ಕೆ.ಶಿ ದೆಹಲಿಗೆ ಪ್ರಯಾಣ ಬೆಳೆಸಿರುವುದು ಹಲವು ಸುಳಿವುಗಳನ್ನು ನೀಡುತ್ತಿದೆ. ಖರ್ಗೆ ಅವರು ಡಿ.ಕೆ.ಶಿ ಪರವಾಗಿ ಬ್ಯಾಟ್ ಬೀಸುತ್ತಾರೆಯೇ ಮತ್ತು ದೆಹಲಿಯಿಂದ ಮರಳುವಾಗ ಸಿಎಂ ಸ್ಥಾನದ ಸ್ಪಷ್ಟನೆಯೊಂದಿಗೆ ಬರುತ್ತಾರೆಯೇ ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

Comments (0)

Your email address will not be published. Required fields are marked *

Back to top button