ರಾಜಕೀಯರಾಜ್ಯಸುದ್ದಿ

ರಾಮಮಂದಿರ ಸ್ಥಾಪಿಸುವ ಮೂಲಕ ಶ್ರೀರಾಮನ ಕೃಪೆಗೆ ಪ್ರಧಾನಿಗಳು ಪಾತ್ರರಾಗಿದ್ದಾರೆ ; ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ : ರಾಮಭಕ್ತನಿಗಾಗಿ ಶ್ರೀರಾಮಚಂದ್ರ ಕಾಯುತ್ತಿದ್ದ, ಅದರಂತೆ ಇದೀಗ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ರಾಮಮಂದಿರ ಸ್ಥಾಪಿಸುವ ಮೂಲಕ ಶ್ರೀರಾಮನ ಕೃಪೆಗೆ ಪ್ರಧಾನಿಗಳು ಪಾತ್ರರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ನಗರದ ಗೊಲ್ಲರ ಕಾಲನಿಯಲ್ಲಿ ಶ್ರೀರಾಮ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ನೇರ ಪ್ರಸಾರಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂದು ಇಡೀ ಜಗತ್ತೆ ಶ್ರೀರಾಮ ಮಂದಿರ ನಿರ್ಮಾಣದ ಸಂಭ್ರಮಾಚರಣೆಯಿಲ್ಲಿದ್ದು, ನಾವು ಕೂಡಾ ಬೆಳಿಗ್ಗೆಯಿಂದ ಎಲ್ಲ ದೇವಸ್ಥಾನಗಳಿಗೆ ಭೇಟಿ ನೀಡಿ, ದರ್ಶನ ಪಡೆದುಕೊಂಡಿದ್ದೇನೆ. ಎಲ್ಲೆಡೆ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ನಾಡಿನಾದ್ಯಂತ ರಾಮನ ಸಂಭ್ರಮ ಮನೆ ಮಾಡಿದೆ, ಈ ಸಂಭ್ರಮವನ್ನು ಕೋಟ್ಯಾಂತರ ಜನರು ಟಿವಿಯ ಮೂಲಕ ವೀಕ್ಷಣೆ ಮಾಡುತ್ತಿದ್ದು, ಸಾವಿರಾರು ಜನರು ಅಯೋಧ್ಯೆಗೆ ಹೋಗಿದ್ದಾರೆ. ನಗರದ ಹಲವೆಡೆಗಳಲ್ಲಿ ಎಲ್ಇಡಿ ಸ್ಕ್ರೀನ್ ಹಾಕಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ನಮ್ಮ ರಾಮ ನಮ್ಮ ಮನೆಗೆ ಬಂದಿದ್ದಾರೆಂಬ ಭಾವನೆ ಜನರಲ್ಲಿದೆ. ಈ ಮೂಲಕ ಎಲ್ಲರ ಮನೆ ಮನಗಳಲ್ಲಿ ರಾಮ ವಿಜೃಂಭಿಸುತ್ತಿದ್ದಾನೆ. ಈ ಎಲ್ಲ ಕಾರ್ಯಕ್ಕೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು, ರಾಮೋತ್ಸವ ದಿನ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯ ಸರ್ಕಾರ ತುಷ್ಟಿಕರಣ ರಾಜಕಾರಣ ಮಾಡುತ್ತಿದ್ದು, ರಜೆ ನೀಡದೇ ಇರುವುದಕ್ಕೆ ಇದೇ ಕಾರಣ. ಸಿಎಂ ಸಿದ್ದರಾಮಯ್ಯ ಅವರು ರಜೆ ನೀಡುವ ಕುರಿತು ರಾಹುಲ್ ಗಾಂಧಿ ಅವರಿಗೆ ಕೇಳಿರಬಹುದು, ಅವರು ಬೇಡಾ ಎಂದಿದ್ದಾರೆ, ಅದಕ್ಕೆ ರಜೆ ನೀಡದೇ ಇರಬಹುದು. ಜೊತೆಗೆ ರಾಮಜನ್ಮಭೂಮಿ ಹೋರಾಟ 1980-1981 ರಿಂದ ಆರಂಭ ಆದಾಗಿನಿಂದಲೂ ಕಾಂಗ್ರೆಸ್ ಇದೇ ರೀತಿ ತುಷ್ಟಿಕರಣ ರಾಜಕಾರಣ ಮಾಡುತ್ತಿದೆ. ಇದೀಗ ಮಂದಿರ ಉದ್ಘಾಟನೆಗೆ ಆಹ್ವಾನ ಆಮಂತ್ರಣ ಪತ್ರಿಕೆ ನೀಡಿದರು ಕೂಡಾ ಬರುವುದಿಲ್ಲ ಎಂದರು.

ಆರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅಯೋಧ್ಯೆಗೆ ಹೋಗಲ್ಲಾ ಎಂದು ಹೇಳಿದ್ದರು. ಬಳಿಕ ಜನರ ಭಾವನೆ ತಿಳಿದು ಅಯೋಧ್ಯೆಗೆ ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ.‌ ಇದು ನಿಜವಾದ ಭಕ್ತಿ ಅಲ್ಲ, ಹಿಂದೂ ವಿರೋಧಿ ಸಿದ್ದರಾಮಯ್ಯ ಎನ್ನುವುದು ಈ ಮೂಲಕ ತಿಳಿಯುತ್ತದೆ ಎಂದು ಕುಟುಕಿದರು.

Comments (0)

Your email address will not be published. Required fields are marked *

Back to top button