ಸಿನಿಮಾ

ಟಾಕ್ಸಿಕ್’ ಟಿಕೆಟ್ ಲುಕ್ ಎಐ ಸೃಷ್ಟಿಯಲ್ಲ;ಅಸಲಿ ಮೇಕೋವರ್ ವಿಡಿಯೋ ರಿಲೀಸ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ‘ಟಿಕೆಟ್’ ಲುಕ್ ಕುರಿತಾದ ಎಲ್ಲಾ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ಈ ಯಂಗ್ ಲುಕ್ ಕೇವಲ AI ಸೃಷ್ಟಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗಳು ಸುಳ್ಳೆಂದು ಸಾಬೀತಾಗಿದ್ದು, ಯಶ್ ಅವರ ನಿಜವಾದ ಮೇಕೋವರ್ ವಿಡಿಯೋ ಈಗ ವೈರಲ್ ಆಗಿದೆ.

ಸೆಲೆಬ್ರಿಟಿ ಹೇರ್‌ಸ್ಟೈಲಿಸ್ಟ್ ಅಲೆಕ್ಸ್ ವಿಜಯ್ ಕಾಂತ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಯಶ್ ಅವರು ಗಡ್ಡ ಟ್ರಿಮ್ ಮಾಡಿ, ಹೇರ್ ಕಟ್ ಮಾಡಿಸಿಕೊಂಡು ‘ಟಿಕೆಟ್’ ಪಾತ್ರಕ್ಕಾಗಿ ಸಖತ್ ಯಂಗ್ ಆಗಿ ಬದಲಾದ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ಕಾಣಬಹುದು.ಯಶ್ ಅವರು ಕೆಲಸದಲ್ಲಿ ಪರ್ಫೆಕ್ಷನಿಸ್ಟ್ ಎಂಬುದಕ್ಕೆ ಈ ಲುಕ್ ಮತ್ತೊಂದು ಸಾಕ್ಷಿಯಾಗಿದೆ. ‘ಕೆಜಿಎಫ್’ ಸರಣಿಯ ನಂತರ ‘ಟಾಕ್ಸಿಕ್’ ಚಿತ್ರದ ಮೇಲೆ ಜಾಗತಿಕ ಮಟ್ಟದ ನಿರೀಕ್ಷೆಯಿರುವುದರಿಂದ, ಅವರು ಪ್ರತಿಯೊಂದು ಸಣ್ಣ ವಿಷಯದ ಮೇಲೂ ವೈಯಕ್ತಿಕ ಕಾಳಜಿ ವಹಿಸಿದ್ದಾರೆ. ಈ ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿರುವ ಯಶ್, ‘ಟಿಕೆಟ್’ ಪಾತ್ರದ ಮೇಕೋವರ್ ಅನ್ನು ಪಕ್ಕಾ ಪ್ಲಾನ್ ಮಾಡಿಯೇ ಸಿದ್ಧಪಡಿಸಿದ್ದಾರೆ ಎಂಬುದು ಈಗ ದೃಢಪಟ್ಟಿದೆ.

ಸದ್ಯ ಯಶ್ ಅವರ ಈ ಹೊಸ ಅವತಾರವನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದು, ಸಿನಿಮಾದ ಮೇಕಿಂಗ್ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿದೆ. ಚಿತ್ರತಂಡವು ಮುಂದಿನ ದಿನಗಳಲ್ಲಿ ಭರ್ಜರಿ ಈವೆಂಟ್ ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದು, ಆ ಸಂದರ್ಭದಲ್ಲಿ ಈ ಲುಕ್‌ನ ಹಿಂದಿನ ಶ್ರಮ ಮತ್ತು ಪಾತ್ರದ ಮಹತ್ವದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ‘ಟಾಕ್ಸಿಕ್’ ಚಿತ್ರದ ಪ್ರತಿಯೊಂದು ಅಪ್‌ಡೇಟ್ ಈಗ ಸಿನಿರಂಗದಲ್ಲಿ ದೊಡ್ಡ ಸಂಚಲನ ಮೂಡಿಸುತ್ತಿದೆ.

Comments (0)

Your email address will not be published. Required fields are marked *

Back to top button