ರಾಜಕೀಯರಾಜ್ಯ

ಸದನದಲ್ಲಿ ಆರ್. ಅಶೋಕ್ ‘ಪೆನ್-ಡ್ರೈವ್’ ಬಾಂಬ್; 252 ಕೋಟಿ ಲಂಚದ ಆರೋಪ!

ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಇಂದು ‘ಪೆನ್-ಡ್ರೈವ್’ ಬಾಂಬ್ ಸಿಡಿಸುವ ಮೂಲಕ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರದ ಆಡಿಯೋ ಮತ್ತು ವಿಡಿಯೋ ದಾಖಲೆಗಳು ನನ್ನ ಬಳಿ ಇವೆ ಎಂದು ಅಶೋಕ್ ಗುಡುಗಿದ್ದಾರೆ.

ರಾಜ್ಯದ ಅಬಕಾರಿ ಇಲಾಖೆಯು ಭ್ರಷ್ಟಾಚಾರದ ‘A1’ ಇಲಾಖೆಯಾಗಿದೆ. ಪ್ರತಿ ತಿಂಗಳು ಒಂದೊಂದು ಮದ್ಯದ ಅಂಗಡಿಯಿಂದ 10 ರಿಂದ 15 ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಅಂದಾಜಿನ ಪ್ರಕಾರ ತಿಂಗಳಿಗೆ 21 ಕೋಟಿ ರೂಪಾಯಿ ಹಾಗೂ ವರ್ಷಕ್ಕೆ 252 ಕೋಟಿ ರೂಪಾಯಿ ಲಂಚದ ಹಣ ಸಂಗ್ರಹವಾಗುತ್ತಿದೆ ಎಂದು ಅಶೋಕ್ ಲೆಕ್ಕಾಚಾರ ಮುಂದಿಟ್ಟಿದ್ದಾರೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರೇ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಮತ್ತು ಪಾಲು ಕೊಡಬೇಕು ಎಂದು ಹೇಳಿರುವ ಆಡಿಯೋ ಪೆನ್-ಡ್ರೈವ್‌ನಲ್ಲಿದೆ. ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಸಚಿವರು ತನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಅಶೋಕ್ ಕಿಡಿಕಾರಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಸಂಗ್ರಹವಾಗುತ್ತಿರುವ ಹಣವನ್ನು ಬೇರೆ ರಾಜ್ಯಗಳ ಚುನಾವಣೆಗೆ ಬಳಸಲಾಗುತ್ತಿದೆ ಹಾಗೂ ‘ಕಾಸಿಗಾಗಿ ಪೋಸ್ಟಿಂಗ್’ ದಂಧೆ ಜೋರಾಗಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಮದ್ಯದ ಅಂಗಡಿಗಳ ಹೆಸರು ಬದಲಾಯಿಸಲು ಸಹ ಶೇ. 5 ರಿಂದ 10 ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದಿದ್ದಾರೆ. ಅಬಕಾರಿ ಇಲಾಖೆಯಲ್ಲಿ ದಿನಕ್ಕೊಂದು ಹಗರಣ ಹೊರಬರುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮೌನ ಮುನಿ’ಯಾಗಿದ್ದಾರೆ. ಸಿಎಂ ಅವರ ಆಪ್ತ ಸ್ನೇಹಿತರೇ ಈಗ ಸಿದ್ದರಾಮಯ್ಯ ಮೊದಲಿನಂತೆ ಖಡಕ್ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಇದು ಅಸಹಾಯಕ ಸರ್ಕಾರ ಎಂದು ಅಶೋಕ್ ಟೀಕಿಸಿದ್ದಾರೆ.

ಹುಬ್ಬಳ್ಳಿ ಮನೆ ಹಂಚಿಕೆ ಕಾರ್ಯಕ್ರಮದ ವೇಳೆ ಅಧಿಕಾರಿಗಳೇ ಮದ್ಯದ ಸ್ಟಾಕ್ ಮಾಡಲು ಹೇಳಿದ ವಿಚಾರವನ್ನೂ ಪ್ರಸ್ತಾಪಿಸಿದ ಅಶೋಕ್, “ನೀವು ಮನೆ ಹಂಚಲು ಜನರನ್ನು ಕರೆದಿದ್ದೀರೋ ಅಥವಾ ಜನರ ಮನೆ ಹಾಳು ಮಾಡಲು ಕರೆದಿದ್ದೀರೋ?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

Comments (0)

Your email address will not be published. Required fields are marked *

Back to top button