
ಕರ್ನಾಟಕ: ಹೆಮ್ಮೆಯ ಅರಣ್ಯ ಪ್ರದೇಶಗಳಾದ ಬಂಡೀಪುರ ಮತ್ತು ನಾಗರಹೊಳೆ ಭಾರತದ ಮೊದಲ ಅಂತರರಾಷ್ಟ್ರೀಯ ಬೆಕ್ಕಿನ ಜಾತಿಯ ಪ್ರಾಣಿಗಳ ಶೃಂಗಸಭೆ ಆಯೋಜನೆಗೆ ಸಿದ್ಧತೆ ನಡೆದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಘೋಷಿಸಿದ ಬೆನ್ನಲ್ಲೇ ಕಾರ್ಯಕ್ರಮ ಸಜ್ಜಾಗಿದ್ದು, ಫೆಬ್ರುವರಿ 9 ರಿಂದ 13ರವರೆಗೆ ನಡೆಯಲಿದೆ.ಐದು ದಿನಗಳ ಸಮಾವೇಶದಲ್ಲಿ ಜಗತ್ತಿನ 18 ದೇಶಗಳ ಪ್ರತಿನಿಧಿಗಳು ಹಾಗೂ ಭಾರತದ ವಿವಿಧ ರಾಜ್ಯಗಳ ಅರಣ್ಯಾಧಿಕಾರಿಗಳು ಪಾಲ್ಗೊಳ್ಳುತ್ತಿರುವುದು ವಿಶೇಷ.
ಈ ಶೃಂಗಸಭೆಯು ಕೇವಲ ಸಭೆಯಾಗಿರದೆ, ವನ್ಯಜೀವಿ ಸಂರಕ್ಷಣೆಯಲ್ಲಿ ಜಾಗತಿಕ ಸಹಕಾರವನ್ನು ಹೆಚ್ಚಿಸುವ ಮಹತ್ವದ ವೇದಿಕೆಯಾಗಿದೆ. ಬಂಡೀಪುರದಲ್ಲಿ ಕಾರ್ಯಾಗಾರಗಳು ನಡೆಯಲಿದ್ದು, ನಂತರದ ದಿನಗಳಲ್ಲಿ ನಾಗರಹೊಳೆಯಲ್ಲಿ ಕಾರ್ಯಕ್ರಮ ಮುಂದುವರಿಯಲಿದೆ. 2023ರಲ್ಲಿ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಗೆ ನಾಂದಿ ಹಾಡಿದ್ದರು. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಷ್ಟ್ರವಾಗಿರುವುದರಿಂದ, ನಮ್ಮ ದೇಶದ ಸಂರಕ್ಷಣಾ ಮಾದರಿಗಳನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ.
ಸಭೆಯಲ್ಲಿ ಪ್ರಮುಖವಾಗಿ ಬೆಕ್ಕಿನ ಜಾತಿಯ ಪ್ರಾಣಿಗಳ ಸಂರಕ್ಷಣೆಗೆ ಆಧುನಿಕ ತಂತ್ರಜ್ಞಾನದ ಬಳಕೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ವಿನಿಮಯ ಮತ್ತು ಅರಣ್ಯ ನಿವಾಸಿಗಳ ಪುನರ್ವಸತಿ ಕುರಿತು ಗಂಭೀರ ಚರ್ಚೆಗಳು ನಡೆಯಲಿವೆ. ಚಿರತೆ, ಹಿಮ ಚಿರತೆ ಸೇರಿದಂತೆ ಏಳು ಪ್ರಮುಖ ಬೆಕ್ಕಿನ ಜಾತಿಯ ಪ್ರಾಣಿಗಳ ರಕ್ಷಣೆಗಾಗಿ ಹೊಸ ನೀತಿಗಳನ್ನು ರೂಪಿಸಲು ಈ ಶೃಂಗಸಭೆ ಸಹಕಾರಿಯಾಗಲಿದೆ. ಪರಿಸರ ಮತ್ತು ಅಭಿವೃದ್ಧಿಯ ನಡುವಿನ ಸಮತೋಲನ ಕಾಪಾಡುವ ಬಗ್ಗೆಯೂ ತಜ್ಞರು ಇಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.




