
ಬೀದರ್: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ನಿಷ್ಠರಾಗಿರುವ ಸೋಮನಾಥ ಪಾಟೀಲ ಅವರಿಗೆ ಬಿಜೆಪಿ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಾನುವಾರ (ಜ.14) ರಾತ್ರಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಅದರಲ್ಲಿ ಸೋಮನಾಥ ಪಾಟೀಲ ಅವರ ಹೆಸರು ಕೂಡ ಇದೆ.

ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ಸೋಮನಾಥ ಪಾಟೀಲ ಅವರು ಮೂಲತಃ ಬಿಜೆಪಿ ಕಾರ್ಯಕರ್ತರು. ಈ ಹಿಂದೆ ಬಿ.ಎಸ್. ಯಡಿಯೂರಪ್ಪನವರೊಂದಿಗೆ ಕೆಜೆಪಿ ಪಕ್ಷಕ್ಕೂ ಹೋಗಿದ್ದರು. ಯಡಿಯೂರಪ್ಪ ಅವರು ಪಕ್ಷಕ್ಕೆ ಮರಳಿದ ನಂತರ ಅವರು ಕೂಡ ವಾಪಸ್ ಬಂದಿದ್ದರು. ಯಡಿಯೂರಪ್ಪ ನಂತರ ಅವರ ಮಗ ಬಿ.ವೈ.ವಿಜಯೇಂದ್ರ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಇತ್ತೀಚೆಗೆ ರಾಜ್ಯ ಪದಾಧಿಕಾರಿಗಳ ನೇಮಕದಲ್ಲಿ ವಿಜಯೇಂದ್ರ ಅವರ ಆಪ್ತರಿಗೆ ಪ್ರಾಶಸ್ತ್ರ ಸಿಕ್ಕಿತು. ಆಗಲೇ ಸೋಮನಾಥ ಅವರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು. ಜಿಲ್ಲಾಧ್ಯಕ್ಷ ಸ್ಥಾನಕ್ಕೆ 20ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಸೋಮನಾಥ ಪಾಟೀಲ ಅವರನ್ನು ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ. ಸಂಕ್ರಾಂತಿಯೊಳಗೆ ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆಗಲಿದೆ ಎಂದು ‘ಪ್ರಜಾವಾಣಿ’ ಜ. 3ರಂದು ವರದಿ ಪ್ರಕಟಿಸಿತ್ತು. ಈಗ ಅದು ನಿಜವಾಗಿದೆ. ‘ಪಕ್ಷ ನಿಷ್ಠರಿಗಿಂತ ವ್ಯಕ್ತಿ ನಿಷ್ಠೆ ಹೊಂದಿದವರಿಗೆ ಮಣೆ ಹಾಕಲಾಗಿದೆ’ ಎಂದು ಬಿಜೆಪಿಯ ಕೆಲ ಹಿರಿಯ ಮುಖಂಡರು ಬೇಸರ ವ್ಯಕ್ತಪಡಿಸಲಾಗಿದೆ.




