ರಾಜ್ಯಸುದ್ದಿ

ಮಂಡ್ಯ ಎಕ್ಸ್ ಪ್ರೆಸ್ ವೇನಲ್ಲಿ ತಪ್ಪಿದ ಭಾರಿ ಅನಾಹುತ…!

ಮಂಡ್ಯ : ರಾಜ್ಯದ ಪ್ರಥಮ ಎಕ್ಸ್ ಪ್ರೆಸ್ ವೇನಲ್ಲಿ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕಳ್ಳರ ಕೈಚಳಕಕ್ಕೆ ಪ್ರಯಾಣಿಕರ ಪ್ರಾಣಕ್ಕೆ ಕುತ್ತು ಬಂದು, ಭಾರೀ ಅಪಾಯದಿಂದ 50ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ರಾಗಿಮುದ್ದನಹಳ್ಳಿ ಬಳಿ ಘಟನೆ ನಡೆದಿದ್ದು, ಪ್ರಯಾಣಿಕರು ನಿಟ್ಟಿಸಿರು ಬಿಟ್ಟಿದ್ದಾರೆ. ವಿದ್ಯುತ್ ಟವರ್ ನೆಲಕ್ಕೆ ಅಪ್ಪಳಿಸಿದ ಹಿನ್ನಲೆಯಲ್ಲಿ ಅವಘಡ ನಡೆದಿತ್ತು.

 


ಹೆದ್ದಾರಿ ನಿರ್ಮಾಣದ ಸಮಯದಲ್ಲಿ ಪ್ರದೀಪ್ ಬಿಲ್ಡ್ ಕಾನ್ ಕಂಪನಿಯವರು ವಿದ್ಯುತ್ ಟವರ್ ಗಳನ್ನು ನಿರ್ಮಾಣ ಮಾಡಿದ್ದರು. ಆದರೆ ಕಳ್ಳರು ಟವರ್ ಗಳ ಕಬ್ಬಿಣ ಕಳವು ಮಾಡಿದ ಹಿನ್ನಲೆ ಟವರ್ ಮಧ್ಯಾಹ್ನ ಹೆದ್ದಾರಿಗೆ ಬಿದ್ದಿದೆ. ಟವರ್ ಬೀಳುತ್ತಿದ್ದಂತೆ ವಿದ್ಯುತ್ ತಂತಿಗಳು ಎಕ್ಸ್ ಪ್ರೆಸ್ ವೇ ಸೇರಿದಂತೆ ಸರ್ವಿಸ್ ರಸ್ತೆಗೂ ಬಿದ್ದಿವೆ. ಈ ಸಂದರ್ಭದಲ್ಲಿ ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ಬರುತ್ತಿತ್ತು.

ಅದೃಷ್ಟವಸಾತ್ ವಿದ್ಯುತ್ ತಂತಿ ತುಂಡರಿಸಿದ ಕಾರಣ ಯಾವುದೇ ಪ್ರಯಾಣಿಕರಿಗೆ ವಿದ್ಯುತ್ ಶಾಕ್ ತಗುಲಿಲ್ಲ. ಘಟನೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಮತ್ತು ಬೈಕ್ ನಲ್ಲಿ ಹೋಗುತ್ತಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.


ವಿಷಯ ತಿಳಿದ ಸೆಸ್ಕಾಂ ಮತ್ತು ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದ ನೌಕರರು ನೆಲಕ್ಕೆ ಉರುಳಿ ಬಿದ್ದಿದ್ದ ಟವರ್ ಪಕ್ಕಕ್ಕೆ ಸರಿಪಡಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸುಮಾರು ಒಂದು ಗಂಟೆಗಳ ಕಾಲ ಸರ್ವಿಸ್ ರಸ್ತೆ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಸ್ಥಳೀಯ ನಾಗರಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹಾಕಿರುವ ವಿದ್ಯುತ್ ಟವರ್ ಗಳ ಕಬ್ಬಿಣವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ಕಳ್ಳತನ ನಡೆದು ವರ್ಷಗಳೇ ಕಳೆಯುತ್ತಿದ್ದರೂ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿಲ್ಲ, ಪ್ರದೀಪ್ ಬಿಲ್ಡ್ ಕಾನ್ ಕಂಪನಿಯವರು ಕಳ್ಳತನವಾಗಿರುವ ಟವರ್ ಗಳನ್ನು ಸರಿಪಡಿಸಲು ಮುಂದಾಗಿಲ್ಲ.
ಮಂಡ್ಯ ಮತ್ತು ಮೈಸೂರು ನಡುವೆ ಸುಮಾರು 70ಕ್ಕೂ ಹೆಚ್ಚು ಟವರ್ ಗಳನ್ನು ನಿರ್ಮಾಣ ಮಾಡಲಾಗಿದೆ. ಬಹುತೇಕ ಟವರ್ ಗಳ ಕಥೆ ಇದೇ ಆಗಿದ್ದು, ಕಳ್ಳರ ಕೈಚಳಕಕ್ಕೆ ಮುಕ್ತಿ ನೀಡಬೇಕಾಗಿದೆ. ಪ್ರಯಾಣಿಕರ ಪ್ರಾಣವನ್ನು ರಕ್ಷಣೆ ಮಾಡಬೇಕಾಗಿದೆ.

 

Comments (0)

Your email address will not be published. Required fields are marked *

Back to top button