ರಾಜ್ಯಸುದ್ದಿ

ಮೈಸೂರು-ಬೆಂ ಹೆದ್ದಾರಿ ಸುರಕ್ಷತಾ ಕಾಮಗಾರಿ ಕೈಗೊಳ್ಳಲು ಕೇಂದ್ರದಿಂದ 688 ಕೋಟಿ ರೂ. ಬಿಡುಗಡೆ

ಮೈಸೂರು ; ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಮುಂದಾಗಿದೆ. ಹೆದ್ದಾರಿಯಲ್ಲಿ ಸುರಕ್ಷತೆ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರ 688 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

 

ಹೆದ್ದಾರಿಯಲ್ಲಿ ಪಾದಾಚಾರಿಗಳಿಗೆ ಮೇಲ್ಸೇತುವೆ, ರಸ್ತೆ ಗುರುತುಗಳು, ಗಾರ್ಡ್​​ ರೈಲ್, ಕ್ರ್ಯಾಶ್​ ಬ್ಯಾರಿಯರ್​​ಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ಬಿಡ್​ ಕರೆದಿದೆ. ಈ ಬಗ್ಗೆ ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ಟ್ವಿಟ್​ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಜುಲೈ 2023ರ ಅಂತ್ಯದ ವೇಳೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 400 ಅಪಘಾತಗಳು ಸಂಭವಿಸಿದ್ದವು. ಇದರಲ್ಲಿ 121 ಜನ ಮೃತಪಟ್ಟಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಪಘಾತದ ಸಂಖ್ಯೆ ಕಡಿಮೆಯಾಗಿದೆ.

​ ಈ ಹಿಂದೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸುತ್ತಿದ್ದ ಅಪಘಾತಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ನಿತಿನ್​​​​ ಗಡ್ಕರಿ ಅವರಿಗೆ ಮಾಹಿತಿ ನೀಡಿದ್ದರು. ಕಳೆದ ವರ್ಷ ಅಗಸ್ಟ್​ನಲ್ಲಿ ನಿತಿನ್​ ಗಡ್ಕರಿ ಅವರನ್ನು ಭೇಟಿಯಾಗಿದ್ದ ಸಿಎಂ ಸಿದ್ದರಾಮಯ್ಯ, ಹೆದ್ದಾರಿಯಲ್ಲಿ ಸಂಭವಿಸುತ್ತಿದ್ದ ಅಪಘಾತಗಳು ಹಾಗೂ ಅವೈಜ್ಞಾನಿಕ ಕಾಮಗಾರಿಗಳ ಕುರಿತಾಗಿ ಗಮನ ಸೆಳೆದಿದ್ದರು. ಹಾಗೂ ಹೆದ್ದಾರಿಯಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದರು.

ತಜ್ಞರ ತಂಡ ಕಳಿಸುವ ಭರವಸೆ ನೀಡಿದ್ದ ಸಚಿವ ಹೆದ್ದಾರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ತಜ್ಞರ ತಂಡವೊಂದನ್ನು ವೀಕ್ಷಣೆಗೆ ಕಳುಹಿಸಿ ಲೋಪ ದೋಷ ಸರಿಪಡಿಸುವುದಾಗಿ ಕೇಂದ್ರ ಸಚಿವ ನಿತಿನ್​ ಗಡ್ಕರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭರವಸೆ ನೀಡಿದ್ದರು.

ಹೆದ್ದಾರಿ ಪರಿಶೀಲಿಸಿದ್ದ ತಜ್ಞರ ತಂಡ
ಹೆದ್ದಾರಿಯಲ್ಲಿ ಸಂಭವಿಸುತ್ತಿದ್ದ ಅಪಘಾತ ಕುರಿತು ಕೇಂದ್ರ ಭೂಸಾರಿಗೆ ಸಚಿವಾಲಯ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಸುರಕ್ಷತೆ ಕುರಿತು ಪರಿಶೀಲನೆ ನಡೆಸಲು ಮೂವರ ತಜ್ಞರ ಸಮಿತಿ ನೇಮಿಸಲಾಗಿತ್ತು. ಇತ್ತೀಚಿಗೆ ಸಮಿತಿ ಹೆದ್ದಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಅಪಘಾತಗಳ ಕುರಿತು ರಾಮನಗರ ಜಿಲ್ಲಾ ಪೊಲೀಸರು ಕೂಡ 53 ಅಂಶಗಳ ವರದಿಯನ್ನು ಪ್ರಾಧಿಕಾರಕ್ಕೆ ಕೊಟ್ಟಿದ್ದರು.

 

Comments (0)

Your email address will not be published. Required fields are marked *

Back to top button