ಹೆಣ್ಣಿಗೇಕೆ ಈ ನೋವು? ನಿಂತಿಲ್ಲ ಭ್ರೂಣ ಹತ್ಯೆ..!

ರಾಜ್ಯದಲ್ಲಿ ಇತ್ತೀಚೆಗೆ ಸಂಚಲನ ಸೃಷ್ಟಿಸಿದ್ದ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು, ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುತ್ತಿದ್ದವರ ಮತ್ತು ಅಂತಹ ವೈದ್ಯರಿಗೆ ಪ್ರೋತ್ಸಾಹ ನೀಡುತ್ತಿದ್ದ ದೊಡ್ಡ ಗ್ಯಾಂಗನ್ನೆ ಪೊಲೀಸರು ಬಂಧಿಸಿದ್ದರು. ಸರ್ಕಾರದ ನಿರ್ದೇಶನದಂತೆ ರಾಜ್ಯದ ಎಲ್ಲ ವೈದ್ಯರ ಪ್ರಮಾಣ ಪತ್ರಗಳನ್ನು ಪರಿಶೀಲಿಸೋಕೆ ಇಲಾಖೆ ಮುಂದಾದ ಪರಿಣಾಮ ಸಾಕಷ್ಟು ನಕಲಿ ವೈದ್ಯರು ಸಿಕ್ಕಿ ಬಿದ್ದರು. ಸುಮಾರು ೧೬೦೦ ಕ್ಕೂ ನಕಲಿ ಸರ್ಟಿಫಿಕೇಟ್ ಹೊಂದಿದ್ದ ಎರಡು ಸಾವಿರಕ್ಕೂ ಅಧಿಕ ನಕಲಿ ಕ್ಲಿನಿಕ್, ಲ್ಯಾಬ್‌ಗಳಿಗೂ ಇಲಾಖೆ ಬೀಗ ಜಡಿದಿತ್ತು. ಬಗೆದಷ್ಟು ಬೆಚ್ಚಿ ಬೀಳಿಸೋ ದೈತ್ಯ ಗ್ಯಾಂಗೇ ಇದರ ಹಿಂದೆ ಕೆಲಸ ಮಾಡುತ್ತಿದೆ ಎಂಬ ಆತಂಕಕಾರಿ ಮಾಹಿತಿ ಸಿಕ್ಕ ಬೆನ್ನಲ್ಲೇ ಭಾಗಿಯಾಗಿರುವ ಮಂದಿಯ ಹುಡುಕಾಟಕ್ಕೆ ಇಳಿದ ಆರೋಗ್ಯ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದ ಎಲ್ಲ ವೈದ್ಯರ ಪ್ರಮಾಣ ಪತ್ರಗಳನ್ನು ಪರಿಶೀಲಿಸಿದೆ.

ಈ ಕರಾಳ ದಂಧೆಗೆ ಆರೋಪಿಗಳು ಮಂಡ್ಯ ಜಿಲ್ಲೆಯನ್ನೇ ಅಡ್ಡೆ ಮಾಡಿಕೊಂಡ ಘಟನೆ ಈ ಹಿಂದೆ ದೇಶವನ್ನೇ ಭಯಪಡಿಸಿತ್ತು. ಮಂಡ್ಯಾದ ಹಾಡ್ಯ ಗ್ರಾಮದ ಬಳಿ ಇರೋ ಆಲೆಮನೆಯೊಂದರಲ್ಲಿ ಸಣ್ಣದಾದ ಶೆಡ್ ನಿರ್ಮಾಣ ಮಾಡಿ ಹೇಯಕೃತ್ಯವನ್ನ ನಡೆಸುತ್ತಿದ್ದದ್ದು ಈ ಹಿಂದೆ ಬಯಲಾಗಿತ್ತು ಆಲೆಮನೆಯಲ್ಲಿಯೇ ಎರಡು ವರ್ಷಗಳಲ್ಲಿ 900 ಭ್ರೂಣಲಿಂಗವನ್ನ ಪತ್ತೆ ಮಾಡಿ, ಕರಳು ಬಳ್ಳಿಗಳನ್ನ ಕಮರಿಸಲು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡುತ್ತಿದ್ದ ಆ ದೊಡ್ಡ ಜಾಲವನ್ನ ಭೇದಿಸಿದ್ದ ಪೊಲೀಸರು ಅವರನ್ನ ಬಂಧಿಸಿ ಭ್ರೂಣ ಪತ್ತೆ ಮಾಡುವವರಿಗೆ ಕಡಿವಾಣ ಹಾಕಿದ್ದರು.

ಆದ್ರೀಗ ಮತ್ತೆ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ನಿರಾತಂಕವಾಗಿ ನಡೆಯುತ್ತಿರುವುದರ ಬಗ್ಗೆ ಜನ ಮಾಧ್ಯಮಗಳಿಗೆ ಮಾಹಿತಿ ನೀಡೋದಕ್ಕೆ ಶುರುಮಾಡಿದ್ದಾರೆ. ಎಷ್ಟೇ ಕಠಿಣ ಕ್ರಮ ಕೈಗೊಂಡರು ಹೆಣ್ಣು ಭ್ರೂಣ ಹತ್ಯೆ ನಿಲ್ಲುತ್ತಿಲ್ಲ ಎಂಬ ಆತಂಕದ ಜೊತೆಗೆ ತುಮುಕೂರಿನ ಆಸುಪಾಸಿನಲ್ಲಿ ಸರಕಾರಿ ವೈದ್ಯನೊಬ್ಬ ಲ್ಯಾಬ್ ಒಂದನ್ನ ಬಳಸಿ ಭ್ರೂಣ ಪತ್ತೆ ಮತ್ತು ಹತ್ಯೆಯನ್ನ ನಡೆಸುತ್ತಿದ್ದು ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ತುಮಕೂರು ಸುತ್ತ ಮುತ್ತ ಸರಿಯಾಗಿ ಪರಿಶೀಲಿಸಿ ಆ ಹೆಣ್ಣು ದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಜನ ಆಗ್ರಹಿಸಿದ್ದಾರೆ.
ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರದ 9 ವರ್ಷಗಳಲ್ಲಿ ಸುಮಾರು 2.42ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಒಂದು ದಿನಕ್ಕೆ 95 ಅತ್ಯಾಚಾರ ಪ್ರಕರಣಗಳು ನಡೆದರೆ, ಪ್ರತಿ ಗಂಟೆಗೆ 4 ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು.

ಅತ್ಯಾಚಾರದಂತಹ ದಾರುಣ ಪ್ರಕರಣಗಳು ಬೆಳಕಿಗೆ ಬಂದಾಗ ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟುವುದು ಸಹಜ. ಆದರೆ, ಆ ಆಕ್ರೋಶ ಸಾಂವಿಧಾನಿಕ ಚೌಕಟ್ಟಿನೊಳಗೆ ನಾವು ತರಬಹುದಾದ ಬದಲಾವಣೆಗಳ ಕುರಿತು ಚರ್ಚೆಗಳನ್ನು ಪ್ರಾರಂಭಿಸಬೇಕು. ಸಾಂವಿಧಾನಿಕ ಚೌಕಟ್ಟಿನ ಹೊರಗಡೆ ಇರುವ ಸುಲಭ ಹಾಗೂ ತಾತ್ಕಾಲಿಕ ಪರಿಹಾರಗಳಿಗೆ ಮೊರೆಹೋಗಿ, ಅವುಗಳು ಆ ಪ್ರಕರಣಗಳ ಮಟ್ಟಿಗೆ ತಕ್ಷಣಕ್ಕೆ ತರುವ ತೃಪ್ತಿಯನ್ನು ಸಂಭ್ರಮಿಸಿ, ಅಲ್ಲಿಗೆ ಇಡೀ ವಿಚಾರವನ್ನೇ ಬಿಟ್ಟು ಬಿಡುವ ಸ್ಥಿತಿ ಸೃಷ್ಟಿಯಾಗಬಾರದು, ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಜೊತೆಗೆ ಹೆಣ್ಣಿನ ಅತ್ಯಾಚಾರಕ್ಕೆ ಕಠಿಣ ಕಾನೂನು ಜಾರಿಯಾಗಬೇಕು.




