#Exclusive NewsTop Newsರಾಜಕೀಯರಾಜ್ಯಸುದ್ದಿ
ಜಿ.ಟಿ.ದೇವೇಗೌಡಗೂ ಮುಡಾ ಸಂಕಷ್ಟ ; ಸ್ನೇಹಮಯಿ ಕೃಷ್ಣ ದೂರು..!

ಮೈಸೂರು :ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕುಟುಂಬದ ವಿರುದ್ದವೂ ಇದೀಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಆರೋಪ ಕೇಳಿ ಬಂದಿದೆ. ಜಿ.ಟಿ.ದೇವೇಗೌಡರ ಸ್ವಗ್ರಾಮದಲ್ಲಿರುವ ಅವರ ಸೋದರಿ ಪುತ್ರ ಮಹೇಂದ್ರ ಎಂಬುವರಿಗೆ 50:50ರ ಅನುಪಾತದಲ್ಲಿ ಮುಡಾದಿಂದ 19 ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಈ ಪ್ರಕರಣದಲ್ಲಿ ಭೂ ಮಾಲೀಕನೇ ಅಲ್ಲದ ವ್ಯಕ್ತಿಗೆ ಅಕ್ರಮವಾಗಿ ನಿವೇಶನ ನೀಡಲಾಗಿದೆ ಎಂದು ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಮ್ಮ ಪ್ರಭಾವವನ್ನು ಬಳಸಿಕೊಂಡು, ಸರ್ಕಾರಕ್ಕೆ ಸೇರಿದ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಸಿದ್ದಾರೆ. ಬಳಿಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆ.ಚೌಡಯ್ಯ ಎಂಬುವವರ ಹೆಸರಿಗೆ 50:50 ಅನುಪಾತದಲ್ಲಿ ಒಟ್ಟು ಆರು ನಿವೇಶನಗಳನ್ನು ಅಕ್ರಮವಾಗಿ ಕೊಡಿಸಿದ್ದಾರೆ. ಇದರಲ್ಲಿ, 50X80 ಅಡಿ ಅಳತೆಯ ಎರಡು ನಿವೇಶನಗಳನ್ನು, ಅವರ ಮಗಳು ಡಿ.ಅನ್ನಪೂರ್ಣ ಮತ್ತು ಅಳಿಯ ಜಿ.ಎಂ.ವಿಶ್ವೇಶ್ವರಯ್ಯನವರ ಹೆಸರಿಗೆ ಮಾಡಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.
ಮೈಸೂರು ತಾಲ್ಲೂಕು ಕಸಬಾ ಹೋಬಳಿ ದೇವನೂರು ಗ್ರಾಮದ ಸರ್ವೆ ನಂ.154ರ ಆರ್.ಟಿ.ಸಿ ಪ್ರತಿಯಲ್ಲಿನ 9ನೇ ಕಾಲಂನಲ್ಲಿ ಜವರಯ್ಯ, ಕೆ.ಬೋರಯ್ಯ, ಚೌಡಯ್ಯ, ಪುಟ್ಟಣ್ಣಯ್ಯ, ಗಂಗಾಧರ ಎಂಬುವವರ ಹೆಸರಿಗೆ 3.38 ಎಕರೆ ಜಮೀನಿನ ಜಂಟಿ ಖಾತೆ ಇದೆ. ಇದೇ, ಆರ್ಟಿಸಿಯಲ್ಲಿ 11ನೇ ಕಾಲಂನಲ್ಲಿ ನಗರದ ಭೂಮಿತಿ ಕಾಯಿದೆ ವ್ಯಾಪ್ತಿಗೆ ಒಳ ಪಟ್ಟಿರುವುದಾಗಿ ನಮೂದಿಸಿದೆ. ಅಂದರೆ ಸರ್ಕಾರದ ಆಸ್ತಿಯಾಗಿದೆ.




