Top Newsರಾಜಕೀಯರಾಜ್ಯಸುದ್ದಿ

ಅಶ್ಲೀಲ ಪೆನ್‌ಡ್ರೈವ್‌ ಹಂಚಿಅಚಾನಕ್ಕಾಗಿ ಸಂಸದರಾಗಿದ್ದೀರಿ! ಎಂಎಲ್‌ಸಿ ಸೂರಜ್‌ ರೇವಣ್ಣ ತಿರುಗೇಟು

ಹಾಸನ: ಲೋಕಸಭೆ ಚುನಾವಣೆ ಸಂದರ್ಭ ಅಶ್ಲೀಲ ಪೆನ್‌ಡ್ರೈವ್‌ ಹಂಚಿಕೆ ಮಾಡಿ ಸಂಸದರಾಗಿರುವುದು ಜಗತ್ತಿಗೆ ಗೊತ್ತಿದೆ. ಇದರಿಂದ ಮಾನಸಿಕವಾಗಿ ಕುಗ್ಗಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಸೂರಜ್‌ ರೇವಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೇಯಸ್ ಪಟೇಲ್ ವಿರುದ್ಧ ತೀವ್ರವಾಗಿ ಕಿಡಿಕಾರಿದರು, ಎಚ್‌ಡಿ ರೇವಣ್ಣ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ನಾಯಕರು ತಂತ್ರ ರೂಪಿಸಿದ್ದು, ಹೀಗಾಗಿ ಸಹೋದರ ಮತ್ತು ಮಾಜಿ ಸಂಸದ ಪ್ರಜ್ವಲ್ ಅವರ ಅಶ್ಲೀಲ ವೀಡಿಯೋ ಇರುವ ಪೆನ್‌ಡ್ರೈವ್ ಹಂಚಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆಂದು ವಾಗ್ದಾಳಿ ನಡೆಸಿದರು.

ಬಳಿಕ ಸೂರಜ್‌ ರೇವಣ್ಣ ಎಂಎಲ್‌ಸಿ ಆಗಿ ಮೂರು ವರ್ಷದಲ್ಲಿ ಎಷ್ಟು ಗ್ರಾಮ ಪಂಚಾಯತ್‌ಗೆ ಹೋಗಿದ್ದಾರೆ? ಏನು ಕೆಲಸ ಮಾಡಿದ್ದಾರೆ ಎಂಬ ಶ್ರೇಯಸ್‌ ಪಟೇಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಂಸದನಾಗಿ ಆರು ತಿಂಗಳಾಗಿದೆ. ಹಾಸನ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಇಂತಹ ಪ್ರಕರಣಗಳಿಂದ ನಾನು ಕುಗ್ಗಿದ್ದರೆ ಪ್ರವಾಸ ಏಕೆ ಮಾಡುತ್ತಿದ್ದೆ? ಕತ್ತಲಾದ ಮೇಲೆ ಬೆಳಕಾಗಲೇಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿದ್ದೇವೆ. ಹಳ್ಳಿಗಳಲ್ಲಿ ನಮ್ಮಲ್ಲೇ ಎರಡೆರಡು ಗುಂಪುಗಳಿವೆ. ಸಣ್ಣಪುಟ್ಟ ಸಮಸ್ಯೆಗಳಿದ್ದು, ಬಗೆಹರಿಸಲಾಗುವುದು. ಲೋಕಸಭೆ ಚುನಾವಣೆ ಬಳಿಕ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಜನ ಒಂದು ಬಾರಿ ಕೈಹಿಡಿಯುತ್ತಾರೆ, ನಂತರ ಬಿಡುತ್ತಾರೆ. ಜನಾಭಿಪ್ರಾಯ ಅದು. ಸುಳ್ಳು ಆಶ್ವಾಸನೆ ನೀಡಿ ನಾನು ತಬ್ಬಲಿ ಎಂದು ಎಷ್ಟು ದಿನ ರಾಜಕೀಯ ಮಾಡುತ್ತಾರೆ?’ ಎಂದು ಸಂಸದರ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

Comments (0)

Your email address will not be published. Required fields are marked *

Back to top button