Top Newsರಾಜ್ಯಸುದ್ದಿ

ಬೆಂಗಳೂರಿನ ಸರ್ಜಾಪುರ ಸ್ವಿಫ್ಟ್ ಸಿಟಿ ತಾಣವಾಗಲಿದೆ : ಎಂಬಿ ಪಾಟೀಲ್ – ಏನಿದು ಹೊಸ ಯೋಜನೆ?

ಕರ್ನಾಟಕ ಸರ್ಕಾರ ಈಗ ಹೊಸ ಹೊಸ ಯೋಜನೆಗಳಿಗೆ ಕೈ ಹಾಕಲು ಸಜ್ಜಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ ಅನ್ನೋ ಅಪವಾದವನ್ನು ತೊಳೆದು ಹಾಕಲು ಈಗ ಹೊಸ ಯೋಜನೆಗಳ ಪಟ್ಟಿಯನ್ನು ಆಚೆ ಬಿಡುತ್ತಿವೆ. ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ವ್ಯಾಪಕತೆ ಮತ್ತು ಸಮಗ್ರತೆ ತಂದುಕೊಡುವ ನಿಟ್ಟಿನಲ್ಲಿ ಬೆಂಗಳೂರಿನ ಸರ್ಜಾಪುರದಲ್ಲಿ `ಸ್ವಿಫ್ಟ್ ಸಿಟಿ’ (SWIFT- Startup, Work-Spaces, Intelligence, Finance & Technology) ನಿರ್ಮಾಣಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಇದು ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್ ಬಳಿಕ ಸರ್ಕಾರವೇ ಸ್ಥಾಪಿಸುತ್ತಿರುವ ಮೂರನೇ ಯೋಜಿತ ನಗರವಾಗಲಿದೆ. ಹೆಸರೇ ಹೇಳುವಂತೆ ಇದು ನವೋದ್ಯಮಗಳು, ಕೆಲಸದ ಸ್ಥಳಗಳು, ಬುದ್ಧಿಮತ್ತೆ, ಹಣಕಾಸು ಮತ್ತು ತಂತ್ರಜ್ಞಾನ ಈ ಐದೂ ಔದ್ಯಮಿಕ ವಲಯಗಳನ್ನು ಮುಖ್ಯವಾಗಿ ಪರಿಗಣಿಸಿದೆ. ಇದನ್ನು ಸಾಧಿಸಲು ಸರ್ಜಾಪುರ ಕೈಗಾರಿಕಾ ಪ್ರದೇಶದಲ್ಲಿ 1,000 ಎಕರೆಗೂ ಹೆಚ್ಚು ಜಮೀನನ್ನು ಮೀಸಲಿಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಹೇಳಿದ್ದಾರೆ.

‘ಬೆಂಗಳೂರಿನಲ್ಲಿ ಇಂದು ಸಾವಿರಾರು ಕಂಪನಿಗಳಿವೆ ನಿಜ. ಆದರೆ ಇವುಗಳಿಗೆ ಯೋಜಿತ ಮತ್ತು ವ್ಯವಸ್ಥಿತ ತಾಣಗಳಿಲ್ಲ ಎನ್ನುವ ಅಸಮಾಧಾನ ಹಲವರಲ್ಲಿದೆ. ಆದ್ದರಿಂದ ಸರ್ಜಾಪುರದಲ್ಲಿ ಇಂತಹ ಹೆಜ್ಜೆ ಇಡಲಾಗುತ್ತಿದೆ. ಇಲ್ಲಿ 150 ಮೀ. ಅಗಲದ ಸಂಪರ್ಕ ರಸ್ತೆ ಮಾಡಿ, ವಿಶ್ವ ದರ್ಜೆಯ ಸೌಲಭ್ಯಗಳು, ವಸತಿ ವ್ಯವಸ್ಥೆ, ಶಾಲೆಗಳು ಇರುವಂತೆ ಅಭಿವೃದ್ಧಿ ಪಡಿಸಲಾಗುವುದು. ನೆರೆ ರಾಜ್ಯಗಳಿಂದ ನಮಗೆ ತೀವ್ರ ಸ್ಪರ್ಧೆ ಇದೆ. ಹೀಗಾಗಿ ಇಂತಹ ಉಪಕ್ರಮ ಅನಿವಾರ್ಯ’ ಎನ್ನುವುದು ಅವರ ಮುಂದಾಲೋಚನೆ ಆಗಿದೆ.

ಈ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚಿಕೊಂಡಿರುವ ಅವರು, `ಸರ್ಜಾಪುರ ಪ್ರದೇಶವು ರಾಜಧಾನಿಯಲ್ಲಿರುವ ಐಟಿ ತಾಣಗಳಿಗೆ ಹತ್ತಿರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 44 ಮತ್ತು 48ಕ್ಕೆ ಹತ್ತಿರಲ್ಲಿದೆ. ಸಂಪರ್ಕ ಸೌಲಭ್ಯದ ದೃಷ್ಟಿಯಿಂದ ಇದು ವರದಾನವಾಗಿದ್ದು, ಈ ಭಾಗದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಬೆಳವಣಿಗೆಗೆಗೆ ಇಂಬು ನೀಡಲು ಸೂಕ್ತ ಸ್ಥಳವಾಗಿದೆ. ಇದನ್ನೆಲ್ಲ ಪರಿಗಣಿಸಿ, ಇದನ್ನು ಸ್ವಿಫ್ಟ್ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಇದು ಸ್ಟಾರ್ಟಪ್ ಹಬ್ ಆಗಲಿದ್ದು, ಇಲ್ಲಿ 8-10 ಅತ್ಯಾಧುನಿಕ ಪ್ಲಗ್ ಅಂಡ್ ಪ್ಲೇ ಸೌಲಭ್ಯಗಳು ಇರಲಿವೆ. ಇಂತಹ ಒಂದೊಂದು ಘಟಕಕ್ಕೂ 20-25 ಎಕರೆ ಕೊಡಲಾಗುವುದು’ ಎಂದಿದ್ದಾರೆ.

ಬೆಂಗಳೂರು ಸಿಲಿಕಾನ್ ಸಿಟಿ ಆಗಿದ್ದಾಯ್ತು. ಕರ್ನಾಟಕವನ್ನು ಸಿಲಿಕಾನ್ ಸ್ಟೇಟ್ ಮಾಡುವ ಗುರಿಯನ್ನು ಹೊಂದಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಜ್ಯವನ್ನು ಸಿಲಿಕಾನ್ ಸ್ಟೇಟ್ ಎಂದು ಖ್ಯಾತಿ ಗಳಿಸುವಂತೆ ಮಾಡುವ ಗುರಿಯನ್ನು ಹೊಂದಿದೆ. ಹೀಗಾಗಿಯೇ ರಾಜ್ಯದ ಐದು ಕಡೆ ಮಿನಿ ಕ್ವಿನ್ ಸಿಟಿ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಹಾಕಿಕೊಂಡಿದೆ. ಹುಬ್ಬಳ್ಳಿ-ಧಾರವಾಡ, ವಿಜಯಪುರ ಸೇರಿದಂತೆ ಐದು ಕಡೆ ಮಿನಿ ಕ್ವಿನ್ ಸಿಟಿಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

ಈಗಾಗಲೇ ದಾಬಾಸ್​ಪೇಟೆ-ದೊಡ್ಡಬಳ್ಳಾಪುರದ ಮಧ್ಯೆ ಕ್ವಿನ್​ ಸಿಟಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ. 5 ಸಾವಿರ ಎಕರೆ ಜಾಗದಲ್ಲಿ ಕ್ವಿನ್ ಸಿಟಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರೆವೇರಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಇದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಕನಸಿನ ಕೂಸು ಎನ್ನಲಾಗುತ್ತಿದೆ. ಸಚಿವ ಎಂ.ಬಿ.ಪಾಟೀಲ್​ರಿಂದ  ಐಟಿ,ಬಿಟಿ ಇಲಾಖೆ ಜೊತೆ ಸೇರಿ ಕ್ವಿನ್ ಸಿಟಿ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದಾರೆ. ಮುಂಬರುವ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕದಲ್ಲಿ ಮಿನಿ ಕ್ವಿನ್​ ಸಿಟಿಗಳ ರೂಪುರೇಷೆ ಅನಾವರಣವಾಗಲಿದೆ.

ಇನ್ನೋವೇಟಿವ್ ಪರಿಕಲ್ಪನೆಗಳ ಮೂಲಕ ಹೂಡಿಕೆದಾರರನ್ನು ಸೆಳೆಯಬೇಕು, ನಾವು ಸಕ್ರಿಯವಾಗಿ ಕ್ರಮ ಕೈಗೊಳ್ಳದಿದ್ದರೆ, ನೆರೆಹೊರೆಯ ರಾಜ್ಯಗಳು ಹೂಡಿಕೆದಾರರನ್ನು ಸೆಳೆಯುತ್ತವೆ. ನೆರೆಹೊರೆಯ ರಾಜ್ಯಗಳಿಗಿಂತ ನಾವು ಮುಂಚೂಣಿಯಲ್ಲಿ ಇರಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button