ವಿನಯ ಕುಲಕರ್ಣಿ ಮಗಳು ವೈಶಾಲಿಗೆ ಶಿಗ್ಗಾಂವಿ ’ಕೈ’ ಟಿಕೆಟ್?

ಬೆಂಗಳೂರು: ಉಪ ಚುನಾವಣೆಗೆ ಸಜ್ಜಾಗಿರುವ ಮೂರು ಕ್ಷೇತ್ರಗಳ ಪೈಕಿ ಸಂಡೂರಿನಲ್ಲಿ ಎದ್ದಿದ್ದ ತುಸು ಭಿನ್ನ ಸ್ವರವನ್ನು ಬದಿಗೆ ಸರಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ, ಉಳಿದ ಎರಡು ಕ್ಷೇತ್ರಗಳಾದ ಶಿಗ್ಗಾಂವಿ ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಗೋಜಲು ಮುಂದುವರೆದಿದೆ. ಈ ಪೈಕಿ ಮುಸ್ಲಿಂ ಹಾಗೂ లింಗಾಯತರ ನಡುವೆ ಪೈಪೋಟಿ ನಡೆದಿರುವ ಶಿಗ್ಗಾಂವಿ ಬಗ್ಗೆ ಹೈಕಮಾಂಡ್ ನಿರ್ಧಾರಕ್ಕೆ బంದಿದೆ. ಕಳೆದ 5 ಬಾರಿ ಟಿಕೆಟ್ ಪಡೆದು ಸೋಲುಂಡಿದ್ದ ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಟಿಕೆಟ್ ಬೇಡ, ಬದಲಾಗಿ ಪಂಚಮ ಸಾಲಿಗೆ ಟಿಕೆಟ್ ನೀಡಬೇಕು ಎಂಬುದು ಆ ನಿರ್ಧಾರ. ಆದರೆ, ಇದರಿಂದ ಅಸಮಾಧಾನ ಗೊಳ್ಳಲಿರುವ ಅಲ್ಪಸಂಖ್ಯಾತರನ್ನು ಸಮಾಧಾನಗೊಳಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಭವಿಷ್ಯದಲ್ಲಿ ಒಂದು ಎಂಎಲ್‌ಸಿ ಹುದ್ದೆ ನೀಡುವ ಹೈಕಮಾಂಡ್ ಭರವಸೆಗೆ ಅಲ್ಪಸಂಖ್ಯಾತ ನಾಯಕರು ಸಮಾಧಾನಗೊಂಡರೆ, ಆಗ ಈ ಕ್ಷೇತ್ರ ಪಂಚಮಸಾಲಿ ಅಭ್ಯರ್ಥಿಯ ಪಾಲಾಗಲಿದೆ.
ಪಂಚಮಸಾಲಿಗೆ ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್ ಫೈನಲ್?
ಆದರೆ, ಇದಕ್ಕೆ ಅಲ್ಪಸಂಖ್ಯಾತ ನಾಯಕರು ಒಪ್ಪದೇ ಕ್ಷೇತ್ರವನ್ನು ತಮ್ಮ ಸಮುದಾಯಕ್ಕೆ ಉಳಿಸಬೇಕು ಎಂದು ಪಟ್ಟು ಹಿಡಿದರೆ ಮಾತ್ರ ಹೈಕಮಾಂಡ್ ಅದನ್ನು ನಿಭಾಯಿಸುವಲ್ಲಿ ಹೆಣಗಾಡಬೇಕಿದೆ. ಏಕೆಂದರೆ, ಎಐಸಿಸಿ ಪಡೆದಿರುವ ಖಾಸಗಿ ಸಮೀಕ್ಷಾ ವರದಿಯು (ಸುನೀಲ್ ಕುನಗೋಲು ತಂಡ) ಬಿಜೆಪಿಯ ಟಿಕೆಟ್ ಅನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿಗೆ ನೀಡಿರುವುದರಿಂದ ಬಿಜೆಪಿಯ ತಳಮಟ್ಟದ ಕಾರ್ಯಕರ್ತರಲ್ಲಿ ಉಂಟಾಗಿರುವ ಅಸಮಾಧಾನದ ಲಾಭಪಡೆಯಲು ಈ ಬಾರಿ ಕಾಂಗ್ರೆಸ್‌ಗೆ ದೊಡ್ಡ ಅವಕಾಶವಿದೆ. ಅಲ್ಲದೆ, ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯು ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಇದೇ ವೇಳೆ ಕ್ಷೇತ್ರದ ಮುಸ್ಲಿಂ ಸಮುದಾಯ ಯಾವ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯಿಲ್ಲ. ಮುಸ್ಲಿಂ ಸಮುದಾಯದ ಮನವೊಲಿಸಿ ಈ ಕ್ಷೇತ್ರದ ಟಿಕೆಟ್ ಅನ್ನು ಪಂಚಮಸಾಲಿಗೆ ನೀಡಿದರೆ ಮುಸ್ಲಿಂ ಮತಗಳು ಹಾಗೂ ವಿಭಜನೆಗೊಳ್ಳುವ ಪಂಚಮಸಾಲಿ ಮತಗಳು ಮತ್ತು ತುಸು ಉತ್ತಮ ಪ್ರಮಾಣದಲ್ಲಿರುವ ಕುರುಬ ಹಾಗೂ ಹಿಂದುಳಿದ ವರ್ಗದ ಸಾಂಪ್ರದಾಯಿಕ ಮತಗಳು ಒಗ್ಗೂಡಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚು ವರದಿ ಹೇಳಿದೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಬಲವಾಗಿ ನಂಬಿದೆ. ಹೀಗಾಗಿಯೇ ಪಟ್ಟು ಹಿಡಿದಿರುವ ಮುಸ್ಲಿಂ ನಾಯಕರಿಗೆ ಎಂಎಲ್‌ಸಿ ಸೇರಿದಂತೆ ಪರ್ಯಾಯ ಆಫರ್‌ಗಳನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ನಾಯಕರು ಒಪ್ಪುವರೋ ಅಥವಾ ಇಲ್ಲವೋ ಎಂಬುದರ ಮೇಲೆ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದು ನಿರ್ಧಾರವಾಗಲಿದೆ.
ವಿನಯ ಕುಲಕರ್ಣಿ ಮಗಳು ವೈಶಾಲಿಗೆ ಶಿಗ್ಗಾಂವಿ?
ಮೂಲಗಳ ಪ್ರಕಾರ, ಪಂಚಮಸಾಲಿ ಸಮಾಜಕ್ಕೆ ಈ ಟಿಕೆಟ್ ನೀಡಬೇಕು ಎಂಬ ನಿರ್ಧಾರವೇನಾದರೂ ಹೈಕಮಾಂಡ್ ತೆಗೆದುಕೊಂಡರೆ ಆಗ ಕಾಂಗ್ರೆಸ್ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಅವರ ಮಗಳು ವೈಶಾಲಿ ಕುಲಕರ್ಣಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ವೈಶಾಲಿಯಲ್ಲದೆ, ಇದೇ ಸಮುದಾಯದಿಂದ ಸೋಮಣ್ಣ ಬೇವಿನಮರದ್ ಹಾಗೂ ರಾಜನ್ ಕುನ್ನೂರು ಅವರ ಹೆಸರು ಹೈ ಕಮಾಂಡ್ ಮುಂದಿರುವ ಪ್ಯಾನಲ್‌ನಲ್ಲಿ ಇದೆ. ಇನ್ನು ಅಲ್ಪಸಂಖ್ಯಾತರಿಗೆ ನೀಡುವ ನಿರ್ಧಾರವಾದರೆ ಆಗ ಯೂಸೂಫ್ ಪಠಾಣ್ ಅಥವಾ ಅಜ್ಜಂ ಪೀರ್ ಖಾದ್ರಿ ಪೈಕಿ ಒಬ್ಬರಿಗೆ ಅದೃಷ್ಟ ಒಲಿಯಬಹುದು.





