ಚಾಮರಾಜನಗರ : ಹನೂರು ತಾಲೂಕಿನ ಮಾರ್ಟಳ್ಳಿ ಮತ್ತು ಸುಳ್ವಾಡಿ ಗ್ರಾಮಗಳಲ್ಲಿ 47 ಮಂದಿಗೆ ಕಿಡ್ನಿ ವೈಫಲ್ಯ ಸಂಭವಿಸಿದ್ದು ಫ್ಲೋರೈಡ್ ಮಿಶ್ರಿತ ಕುಡಿಯುವ ನೀರಿನಿಂದಾಗಿ ಅನಾಹುತ ಸಂಭವಿಸಿರುವುದಾಗಿ ತಿಳಿದುಬಂದಿದೆ. ದಶಕಗಳಿಂದಲೂ ಈ ಭಾಗದಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿರುವ ನೀರನ್ನೇ ಸೇವಿಸುತ್ತಿರುವುದರಿಂದ ಕೇವಲ ಕಿಡ್ನಿ ಸಮಸ್ಯೆ ಮಾತ್ರವಲ್ಲದೆ ಥೈರಾಯ್ಡ್, ಹೈಪರ್ ಟೆನ್ಷನ್ ಮತ್ತು ಸಂದಿವಾತದಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗಿರುವುದು ಆತಂಕ ಮೂಡಿಸಿದೆ.
ಈ ಗ್ರಾಮಗಳಲ್ಲಿನ ಅಂತರ್ಜಲದಲ್ಲಿ ಫ್ಲೋರೈಡ್ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದ್ದು, ಈ ವಿಷಕಾರಿ ನೀರಿನ ತೀವ್ರತೆ ಎಷ್ಟಿದೆಯೆಂದರೆ, ಹಿಂದೆ ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಗೆ ಬಂದಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯೂ ಸಹ ಇಲ್ಲಿನ ನೀರು ಕುಡಿದು ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದರು. ಅಂದೇ ನೀರಿನ ಗುಣಮಟ್ಟದ ಬಗ್ಗೆ ಎಚ್ಚರಿಕೆ ಸಿಕ್ಕಿದ್ದರೂ, ಜಿಲ್ಲಾಡಳಿತವು ಈವರೆಗೆ ಯಾವುದೇ ಶಾಶ್ವತ ಪರಿಹಾರ ಕಲ್ಪಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸ್ತುತ ಗ್ರಾಮಸ್ಥರು ಶುದ್ಧ ನೀರಿಗಾಗಿ ತಿಂಗಳಿಗೆ ಸಾವಿರಾರು ರೂಪಾಯಿ ವ್ಯಯಿಸಿ ಟ್ಯಾಂಕರ್ ನೀರನ್ನು ಅವಲಂಬಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ದಶಕಗಳ ಕಾಲ ಹೋರಾಡಿದರೂ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದ್ದು, ಇಡೀ ಗ್ರಾಮವೇ ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಈ ಗ್ರಾಮಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಬೇಕು ಮತ್ತು ಬಾಧಿತರಿಗೆ ಸೂಕ್ತ ವೈದ್ಯಕೀಯ ನೆರವು ನೀಡುವಂತೆ ಆಗ್ರಹಿಸಿದ್ದಾರೆ.


