ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ವಿಸ್ತರಣೆ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಕರು ಹಾಜರಾಗಬೇಕಿರುವ ಹಿನ್ನಲೆ ಶಾಲಾ ಮಕ್ಕಳಿಗೆ ಮತ್ತೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 13ರಿಂದ 18ರವರೆಗಿನ ಆರು ದಿನಗಳನ್ನು ಹೆಚ್ಚುವರಿ ರಜೆಯನ್ನ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ದಸರಾ ರಜೆಯ ಅವಧಿಯನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ರಜೆ ವಿಸ್ತರಣೆ ಮಾಡಿ ಘೋಷಣೆ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಾತಿಗಣತಿ ಸಮೀಕ್ಷೆ ಇನ್ನೂ ಮುಕ್ತಾಯವಾಗಿಲ್ಲ ಎಂದು ಹೇಳಿದರು. ಕೊಪ್ಪಳ ಜಿಲ್ಲೆಯಲ್ಲಿ ಜಾತಿಗಣತಿ ಸಮೀಕ್ಷೆ ಶೇಕಡಾ 90ರಷ್ಟು ಪೂರ್ಣಗೊಂಡಿದೆ. ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದು ಕೇವಲ ಶೇಕಡಾ 68-69ರಷ್ಟು ಮಾತ್ರ ಪೂರ್ಣಗೊಂಡಿದೆ. ಇಂದು ಸಂಜೆಯೊಳಗೆ ರಾಜ್ಯಾದ್ಯಂತ ಜಾತಿಗಣತಿಯ ಸಂಪೂರ್ಣ ವಿವರ ಬರಲಿದೆ, ಎಂದು ಅವರು ತಿಳಿಸಿದರು.


