ಯುಗಾದಿ ಹಬ್ಬದಂದೇ ಬಿಜೆಪಿ ರಣಕಹಳೆ: ಉಪಚುನಾವಣೆಗೆ ಅಭ್ಯರ್ಥಿಗಳ ಘೋಷಣೆ

ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಬಿಜೆಪಿ ಉಪಚುನಾವಣಾ ರಣಕಹಳೆ ಊದಿದೆ. ರಾಜ್ಯದ ಪ್ರಮುಖ ಕ್ಷೇತ್ರಗಳಾದ ದಾವಣಗೆರೆ ಮತ್ತು ಬಾಗಲಕೋಟೆಗೆ ಅಭ್ಯರ್ಥಿಗಳನ್ನು ಘೋಷಿಸಿ ಚುನಾವಣಾ ಸಮರಕ್ಕೆ ಅಧಿಕೃತ ಚಾಲನೆ ನೀಡಿದೆ.
ಬಾಗಲಕೋಟೆ ಕ್ಷೇತ್ರದಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಬಲವಾದ ಹಿಡಿತ ಹೊಂದಿರುವ ಅವರನ್ನು ಆಯ್ಕೆ ಮಾಡಿರುವುದು ಪಕ್ಷದ ತಂತ್ರದ ಭಾಗವೆಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ದಾವಣಗೆರೆಯಲ್ಲಿ ಅಚ್ಚರಿ ಅಭ್ಯರ್ಥಿಗೆ ಬಿಜೆಪಿ ಮಣೆ ಹಾಕಿದ್ದು, ಶ್ರೀನಿವಾಸ್ ದಾಸ್ ಕರಿಯಪ್ಪ ಅವರಿಗೆ ಟಿಕೆಟ್ ಘೋಷಿಸಿದೆ. ಎಸ್ಟಿ ಸಮುದಾಯಕ್ಕೆ ಸೇರಿದ ಶ್ರೀನಿವಾಸ್ ಅವರು ಪಕ್ಷದ ಎರಡು ಬಣಗಳಲ್ಲೂ ವಿಶ್ವಾಸ ಹೊಂದಿರುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಅಹಿಂದ ಮತ್ತು ಲಿಂಗಾಯತ ಮತಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಬಿಜೆಪಿ ಈ ತಂತ್ರ ರೂಪಿಸಿದೆ ಎನ್ನಲಾಗುತ್ತಿದೆ. “ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇನೆ,” ಎಂದು ಶ್ರೀನಿವಾಸ್ ದಾಸ್ ಕರಿಯಪ್ಪ ಹೇಳಿದ್ದಾರೆ.
ಏಪ್ರಿಲ್ 9ರಂದು ಉಪಚುನಾವಣೆಯ ಮತದಾನ ನಡೆಯಲಿದ್ದು, ಈ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಭಾರೀ ರಣತಂತ್ರ ರೂಪಿಸಿದೆ. ಇಬ್ಬರೂ ಕ್ಷೇತ್ರಗಳಲ್ಲಿ ಜಯ ಸಾಧಿಸುವುದು ಪಕ್ಷದ ಪ್ರಮುಖ ಗುರಿಯಾಗಿದೆ.




