ಚಾಮುಂಡೇಶ್ವರಿ ರಾಜಕೀಯದಲ್ಲಿ ಜಿ.ಟಿ. ದೇವೇಗೌಡ ಕೊಟ್ಟ ಶಾಕ್ ಏನು !

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಹಿರಿಯ ನಾಯಕ ಹಾಗೂ ಶಾಸಕ ಜಿ.ಟಿ. ದೇವೇಗೌಡ ತಮ್ಮ ರಾಜಕೀಯ ಭವಿಷ್ಯದ ಕುರಿತು ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಮುಂದಿನ ಚುನಾವಣೆಯಲ್ಲೂ ಜಾತ್ಯತೀತ ಜನತಾದಳ ಪಕ್ಷದಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಜಯಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಾನು ಜೆಡಿಎಸ್ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ದೃಢವಾಗಿ ಹೇಳಿದ್ದಾರೆ. ಒಂದು ವೇಳೆ ಪಕ್ಷವು ತಮಗೆ ಟಿಕೆಟ್ ನೀಡಲು ನಿರಾಕರಿಸಿದರೆ, ಕ್ಷೇತ್ರದ ಮತದಾರರು ಮತ್ತು ಬೆಂಬಲಿಗರು ನೀಡುವ ಸಲಹೆಯಂತೆ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಘೋಷಿಸುವ ಮೂಲಕ ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಕ್ಷೇತ್ರದ ಜನರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಜಿಟಿಡಿ, “ತಮ್ಮಿಂದ ಯಾವುದೇ ವೈಯಕ್ತಿಕ ಲಾಭ ಪಡೆಯದ ಸಾಮಾನ್ಯ ಜನರು ತಮ್ಮನ್ನು ಗೆಲ್ಲಿಸಿದ್ದಾರೆ, ಆದರೆ ತಾವು ಬೆಳೆಸಿದವರೇ ಇಂದು ತಮ್ಮ ವಿರುದ್ಧ ತಿರುಗಿಬಿದ್ದಿದ್ದಾರೆ” ಎಂದು ದೂರವಾಗಿರುವ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ತಮ್ಮ ರಾಜಕೀಯ ಏಳಿಗೆಗೆ ಕಾರಣವಾದವರು ಮತ್ತು ಆರ್ಥಿಕವಾಗಿ ಸದೃಢರಾದವರು ಈಗ ತಮ್ಮ ವಿರುದ್ಧವೇ ತಂತ್ರ ರೂಪಿಸುತ್ತಿರುವುದು ಹೊಸದೇನಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
ಕಳೆದ ಕೆಲವು ಸಮಯದಿಂದ ಜೆಡಿಎಸ್ನ ಪ್ರಮುಖ ಸಭೆ ಮತ್ತು ಸಮಾರಂಭಗಳಿಂದ ಜಿಟಿಡಿ ದೂರ ಉಳಿದಿದ್ದು, ಪಕ್ಷದ ವರಿಷ್ಠರು ಕೂಡ ಅವರ ಅನುಪಸ್ಥಿತಿಯಲ್ಲೇ ಮುಂದಿನ ಕಾರ್ಯತಂತ್ರ ರೂಪಿಸುವ ಮಾತುಗಳನ್ನಾಡಿದ್ದರು. ಅಷ್ಟೇ ಅಲ್ಲದೆ, ಪಕ್ಷದ ಅಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ಗಳಿಂದಲೂ ಜಿಟಿಡಿ ಅವರ ಫೋಟೋಗಳನ್ನು ಕೈಬಿಡಲಾಗಿತ್ತು. ಇಂತಹ ವಿಷಮ ಪರಿಸ್ಥಿತಿಯ ನಡುವೆಯೂ ಜಿಟಿಡಿ ಅವರು ಜೆಡಿಎಸ್ ಪರವಾಗಿ ನಿಂತಿರುವುದು ಮತ್ತು ಕ್ಷೇತ್ರದ ಜನರ ತೀರ್ಮಾನವೇ ಅಂತಿಮ ಎಂದು ಹೇಳಿರುವುದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೊಸ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡಿದೆ.




