udupiಜಿಲ್ಲೆ

ಅಬಕಾರಿ ಡಿಸಿಗೆ ಲೋಕಾಯುಕ್ತ ಶಾಕ್; ಅಧಿಕಾರಿ ಮನೆಯಲ್ಲಿ ಪತ್ತೆಯಾಯ್ತು 8.69 ಕೋಟಿ !?

ಉಡುಪಿ: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧದ ಲೋಕಾಯುಕ್ತ ಬೇಟೆ ಮುಂದುವರಿದಿದ್ದು, ಉಡುಪಿ ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿ ಶ್ರೀನಿವಾಸ್ ಟಿ.ಎಂ. ಅವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ನಡೆದ ದಾಳಿಯಲ್ಲಿ ಭಾರಿ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದೆ. ಮಂಗಳೂರು ವಿಭಾಗದ ಲೋಕಾಯುಕ್ತ ಎಸ್.ಪಿ. ದಿನೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಶೋಧನಾ ಕಾರ್ಯಾಚರಣೆಯು ಲೋಕಾಯುಕ್ತ ಅಧಿಕಾರಿಗಳನ್ನೇ ಬೆರಗುಗೊಳಿಸಿದೆ. ಒಟ್ಟು 15 ಕಡೆಗಳಲ್ಲಿ ಏಕಕಾಲಕ್ಕೆ ನಡೆದ ದಾಳಿಯ ವೇಳೆ ಅಬಕಾರಿ ಜಿಲ್ಲಾಧಿಕಾರಿಯ ಆಸ್ತಿಯ ಒಟ್ಟು ಮೌಲ್ಯ ಬರೋಬ್ಬರಿ 8 ಕೋಟಿ 69 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ.

ದಾಳಿಯ ವೇಳೆ ಪತ್ತೆಯಾಗಿರುವ ಸ್ಥಿರ ಆಸ್ತಿಗಳ ಪಟ್ಟಿ ಬೆಚ್ಚಿಬೀಳಿಸುವಂತಿದೆ. ಶ್ರೀನಿವಾಸ್ ಅವರಿಗೆ ಸೇರಿದ 11 ನಿವೇಶನಗಳು, 6 ವಾಸದ ಮನೆಗಳು ಹಾಗೂ 31 ಎಕರೆ ಕೃಷಿ ಜಮೀನನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 6,90,64,716 ರೂಪಾಯಿಗಳೆಂದು ತಿಳಿದುಬಂದಿದೆ. ಅಧಿಕಾರಿಗಳ ಪರಿಶೀಲನೆಯ ನಂತರ ಈ ಎಲ್ಲಾ ಆಸ್ತಿಗಳು ಅಕ್ರಮವಾಗಿ ಗಳಿಸಿರುವುದು ಎಂಬ ಪ್ರಾಥಮಿಕ ತೀರ್ಮಾನಕ್ಕೆ ಬರಲಾಗಿದೆ.

ಕೇವಲ ಸ್ಥಿರ ಆಸ್ತಿ ಮಾತ್ರವಲ್ಲದೆ, ಚರಾಸ್ತಿಗಳ ರೂಪದಲ್ಲಿಯೂ ಕೋಟ್ಯಂತರ ರೂಪಾಯಿ ಸಂಪತ್ತು ಪತ್ತೆಯಾಗಿದೆ. ಶೋಧದ ವೇಳೆ ಸುಮಾರು 1.47 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು, 3.95 ಲಕ್ಷ ರೂಪಾಯಿ ನಗದು ಮತ್ತು 17 ಲಕ್ಷ ರೂಪಾಯಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ 25.75 ಲಕ್ಷ ರೂಪಾಯಿಗಳ ಬ್ಯಾಂಕ್ ಠೇವಣಿ ಹಾಗೂ 72 ಲಕ್ಷ ರೂಪಾಯಿ ಮೌಲ್ಯದ ಇತರೆ ಐಷಾರಾಮಿ ವಸ್ತುಗಳು ಸೇರಿ ಒಟ್ಟು 2,66,90,001 ರೂಪಾಯಿ ಚರಾಸ್ತಿ ಪತ್ತೆಯಾಗಿದೆ. ಸದ್ಯ ಅಬಕಾರಿ ಜಿಲ್ಲಾಧಿಕಾರಿಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಲೋಕಾಯುಕ್ತ ತನಿಖೆ ತೀವ್ರಗೊಂಡಿದೆ.

Comments (0)

Your email address will not be published. Required fields are marked *

Back to top button