
ದಕ್ಷಿಣ ಕನ್ನಡ: ಸಾಂಸ್ಕೃತಿಕ ಹೆಮ್ಮೆಯಾದ ಕಂಬಳದ ಕಲರವ ಕರಾವಳಿಯುದ್ದಕ್ಕೂ ಜೋರಾಗಿ ಸಾಗಿದ್ದು, 15ನೇ ವರ್ಷದ ಬಂಟ್ವಾಳದ “ಮೂಡೂರು – ಪಡೂರು” ಜೋಡುಕರೆ ಕಂಬಳವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಮಾಜಿ ಸಚಿವ ಬಿ. ರಮಾನಾಥ್ ರೈ ಅವರ ನೇತೃತ್ವದಲ್ಲಿ ನಡೆದ ಈ ಕಂಬಳ ಕೂಟದಲ್ಲಿ ನಾಡಿನ ಮೂಲೆಮೂಲೆಗಳಿಂದ ಆಗಮಿಸಿದ್ದ ಒಟ್ಟು 151 ಜೊತೆ ಕೋಣಗಳು ಕಣಕ್ಕಿಳಿದು ಪ್ರೇಕ್ಷಕರನ್ನು ರಂಜಿಸಿದವು. ವಿವಿಧ ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯು ಕಂಬಳ ಪ್ರೇಮಿಗಳಲ್ಲಿ ಹೊಸ ಉತ್ಸಾಹವನ್ನು ತುಂಬಿದೆ.

ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ 11 ಜೊತೆ, ಅಡ್ಡಹಲಗೆಯಲ್ಲಿ 8 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 14 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 30 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 26 ಜೊತೆ ಹಾಗೂ ಅತಿ ಹೆಚ್ಚು ಅಂದರೆ ನೇಗಿಲು ಕಿರಿಯ ವಿಭಾಗದಲ್ಲಿ 62 ಜೊತೆ ಕೋಣಗಳು ಭಾಗವಹಿಸಿದ್ದವು. ಪ್ರತಿ ವಿಭಾಗದಲ್ಲಿಯೂ ತೀವ್ರ ಪೈಪೋಟಿ ಕಂಡುಬಂದಿದ್ದು, ಕೋಣಗಳ ವೇಗ ಮತ್ತು ಯಜಮಾನರ ಚತುರತೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕನೆ ಹಲಗೆ ವಿಭಾಗದಲ್ಲಿ ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ ಅವರ ಕೋಣಗಳು ಪ್ರಥಮ ಸ್ಥಾನ ಅಲಂಕರಿಸಿವೆ. ಅಡ್ಡ ಹಲಗೆ ವಿಭಾಗದಲ್ಲಿ ಇರುವೈಲು ದೊಡ್ಡಗುತ್ತು ಜಗದೀಶ್ ಎಂ. ಶೆಟ್ಟಿ ಅವರ ಕೋಣಗಳು ಜಯಗಳಿಸಿದರೆ, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಕೋಣಗಳು ವಿಜೇತರಾಗಿ ಹೊರಹೊಮ್ಮಿವೆ. ಹಾಗೆಯೇ ಹಗ್ಗ ಕಿರಿಯ ವಿಭಾಗದಲ್ಲಿ ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ, ನೇಗಿಲು ಹಿರಿಯದಲ್ಲಿ ಮಾಣಿ ನಾಗರಾಜ ಶೆಟ್ಟಿ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ ಪಣೋಲಿಬೈಲು ಭಂಡಾರದ ಮನೆ ರಮೇಶ್ ಎಂ. ಕುಲಾಲ್ ಅವರ ಕೋಣಗಳು ಅಗ್ರಸ್ಥಾನ ಪಡೆದಿವೆ.
ಬಂಟ್ವಾಳ ಕಂಬಳ ಮುಕ್ತಾಯಗೊಂಡ ಬೆನ್ನಲ್ಲೇ ಈ ಋತುವಿನ ಮುಂದಿನ ಕಂಬಳಗಳ ವೇಳಾಪಟ್ಟಿಯೂ ಸಿದ್ಧವಾಗಿದೆ. ಮಾರ್ಚ್ 15ರಂದು ಬಂಗಾಡಿ ಕಂಬಳ ನಡೆಯಲಿದ್ದು, ನಂತರ ಮಾರ್ಚ್ 21ಕ್ಕೆ ವೇಣೂರ್, ಮಾರ್ಚ್ 28ಕ್ಕೆ ಉಪ್ಪಿನಂಗಡಿ ಕಂಬಳಗಳು ನಡೆಯಲಿವೆ. ಏಪ್ರಿಲ್ ತಿಂಗಳಿನಲ್ಲಿಯೂ ಕಂಬಳದ ಸರಣಿ ಮುಂದುವರಿಯಲಿದ್ದು, ಏಪ್ರಿಲ್ 4ಕ್ಕೆ ಗುರುಪುರ, ಏಪ್ರಿಲ್ 11ಕ್ಕೆ ಬಳಕುಂಜೆ, ಏಪ್ರಿಲ್ 18ಕ್ಕೆ ಹರೇಕಳ ಮತ್ತು ಅಂತಿಮವಾಗಿ ಏಪ್ರಿಲ್ 25ರಂದು ಬಡಗಬೆಟ್ಟುವಿನಲ್ಲಿ ಈ ವರ್ಷದ ಕಂಬಳ ಋತುವಿಗೆ ತೆರೆ ಬೀಳಲಿದೆ.




