ಪರಪ್ಪನ ಅಗ್ರಹಾರ ಜೈಲಿನಲ್ಲಿ ಗಾಂಜಾ ಘಾಟು: ವಾರ್ಡನ್ ಅರೆಸ್ಟ್!

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ವಾರ್ಡನ್ ಒಬ್ಬನೇ ಕೈದಿಗಳಿಗೆ ಗಾಂಜಾ ಸರಬರಾಜು ಮಾಡಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ. ಬಂಧಿತ ವಾರ್ಡನ್ ಪ್ರಕಾಶ್ ಗಾವಡೆ ಎಂಬಾತ ರಾತ್ರಿ ಸುಮಾರು 8:15ಕ್ಕೆ ಜೈಲಿನೊಳಗೆ ಪ್ರವೇಶಿಸುವಾಗ ಭದ್ರತಾ ಸಿಬ್ಬಂದಿಯ ತಪಾಸಣೆಗೆ ಒಳಗಾಗಿದ್ದನು. ಈ ವೇಳೆ ಆತನ ಒಳಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದ ಕಪ್ಪು ಟೇಪ್‌ನಿಂದ ಸುತ್ತಿದ ಗಾಂಜಾ ಪೊಟ್ಟಣ ಮತ್ತು ನಗದು ಹಣ ಪತ್ತೆಯಾಗಿದ್ದು, ಕೂಡಲೇ ಆತನನ್ನು ವಶಕ್ಕೆ ಪಡೆಯಲಾಗಿದೆ.
ಪ್ರಾಥಮಿಕ ವಿಚಾರಣೆಯ ಪ್ರಕಾರ, ಜೈಲಿನಲ್ಲಿರುವ ಕೊಲೆ ಪ್ರಕರಣದ ಕೈದಿಯೊಬ್ಬ ಹತ್ತು ಸಾವಿರ ರೂಪಾಯಿ ಆಮಿಷವೊಡ್ಡಿ ಗಾಂಜಾ ತಂದುಕೊಡುವಂತೆ ಪ್ರಕಾಶ್‌ಗೆ ಸೂಚಿಸಿದ್ದ ಎನ್ನಲಾಗಿದೆ. ಕೆಎಸ್‌ಐಎಸ್‌ಎಫ್ ಸಿಬ್ಬಂದಿಯ ಕಣ್ಣು ತಪ್ಪಿಸಿ ಈ ಅಕ್ರಮ ಎಸಗಲು ಪ್ರಯತ್ನಿಸಿದ ವಾರ್ಡನ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಸ್ತುತ ಪರಪ್ಪನ ಅಗ್ರಹಾರ ಪೊಲೀಸರು ಆರೋಪಿಯನ್ನು ಬಂಧಿಸಿ ಈ ಜಾಲದ ಹಿಂದೆ ಬೇರೆ ಯಾರಿದ್ದಾರೆ ಎಂಬ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಡಿಜಿಪಿ ಅವರು ಜೈಲಿಗೆ ಭೇಟಿ ನೀಡಿ ಅಡುಗೆ ಮನೆ, ಆಸ್ಪತ್ರೆ ಮತ್ತು ಬೇಕರಿ ವಿಭಾಗಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಮೊಬೈಲ್ ಫೋನ್, ಗಾಂಜಾ ಅಥವಾ ಮದ್ಯ ತಯಾರಿಕೆಯಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮ ಜರುಗಿಸುವುದಾಗಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಎಚ್ಚರಿಸಿದ್ದರು. ಇಷ್ಟೆಲ್ಲಾ ಕಟ್ಟುನಿಟ್ಟಿನ ಸೂಚನೆಗಳ ನಡುವೆಯೂ ಜೈಲು ಸಿಬ್ಬಂದಿಯೇ ಇಂತಹ ಕೃತ್ಯಕ್ಕೆ ಕೈಹಾಕಿರುವುದು ಜೈಲು ಆಡಳಿತದ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.
ಹಲವು ತಿಂಗಳುಗಳಿಂದ ಒಂದಲ್ಲಾ ಒಂದು ವಿವಾದಗಳಿಂದ ಸುದ್ದಿಯಾಗುತ್ತಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮಗಳು ಇನ್ನೂ ನಿಂತಿಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜೈಲಿನೊಳಗೆ ನಡೆಯುವ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೇವಲ ಎಚ್ಚರಿಕೆ ಸಾಲದು, ಬದಲಿಗೆ ತಾಂತ್ರಿಕವಾಗಿ ಮತ್ತು ಆಡಳಿತಾತ್ಮಕವಾಗಿ ದೊಡ್ಡ ಮಟ್ಟದ ಸುಧಾರಣೆಯ ಅಗತ್ಯವಿದೆ.




