ರಾಜಕೀಯರಾಜ್ಯಸುದ್ದಿ

ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧ ಇಡಿ ಗೆ ದೂರು: ಮಂತ್ರಿ ಪದವಿಗೆ ಕುತ್ತು?

ಬೆಂಗಳೂರು: ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರಗೆ ಸಂಕಷ್ಟ ಎದುರಾಗಿದೆ. ಅಬಕಾರಿ ಇಲಾಖೆಯಲ್ಲಿ ಅಕ್ರಮ ವರ್ಗಾವಣೆ, ಮನಿ ಲಾಂಡ್ರಿಂಗ್ ವಿಚಾರವಾಗಿ ಇಡಿಗೆ ದೂರು ಸಲ್ಲಿಕೆಯಾಗಿದೆ. ಸಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಸಚಿವ ತಿಮ್ಮಾಪುರ ವಿರುದ್ಧ ದೂರು ನೀಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ನಡೆದಿರುವ ಅಕ್ರಮವನ್ನು ತನಿಖೆ ನಡೆಸುವಂತೆ ದಿನೇಶ್ ಕಲ್ಲಳ್ಳಿ ದೂರಿನಲ್ಲಿ ಮನವಿ ಮಾಡಿದ್ದಾರೆ.

ಅಬಕಾರಿ ಇಲಾಖೆಯಲ್ಲಿ 3 ಡಿಸಿ ಗಳು, 9 ಸೂಪರಿಟೆಂಡೆಂಟ್, 13 ಡಿವೈಎಸ್ಸಿ, 20 ಇನ್ಸೆಪೆಕ್ಟರ್ ವರ್ಗಾವಣೆ ವಿಚಾರವಾಗಿ ಲಂಚ ಪಡೆದಿರುವ ಆರೋಪ ತಿಮ್ಮಾಪುರ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಮೇಲಿತ್ತು. ಈ ಕೂಡಲೇ ಸಚಿವ ಆರ್ ಬಿ ತಿಮ್ಮಾಪುರ್ ಡಿಸಿ ಬಸವರಾಜ್ ಸಂದಿಗವಾಡ, ರಂಗಪ್ಪ, ಮತ್ತು ವಿವೇಕ್ ಇತರೆ ಅಧಿಕಾರಿಗಳ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅಬಕಾರಿ ಇಲಾಖೆಯಲ್ಲಿ ಸುಮಾರು 16 ಕೋಟಿ ಲಂಚ ಸಂಗ್ರಹಿಸಲಾಗಿದೆ ಎಂದು ದೂರು ನೀಡಲಾಗಿದೆ.

ಮಂತ್ರಿ ಪದವಿ ಕಳೆದುಕೊಳ್ತಾರಾ ಆರ್ ಬಿ ತಿಮ್ಮಾಪುರ?

ಇಡಿಗೆ ದೂರು ನೀಡಿರುವುದರಿಂದ ಆರ್ ಬಿ ತಿಮ್ಮಾಪುರ ಪದವಿಗೆ ಕುತ್ತು ಬಂದಿದೆ.. ಸಿಎಂ ಸಿದ್ದರಾಮಯ್ಯ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ. ಸಚಿವ ತಿಮ್ಮಾಪುರ್ ತಮ್ಮ ಇಲಾಖಾ ಹಗರಣವನ್ನು ಸಿಎಂ ಕಛೇರಿಗೂ ಮೆತ್ತಲು ಯತ್ನಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ದೂರಿನ ಬಗ್ಗೆ ಇಡಿ ತನಿಖೆಗೆ ಮುಂದಾದ್ರೆ, ಆರ್ ಬಿ ತಿಮ್ಮಾಪುರ ಮಂತ್ರಿ ಪದವಿ ಕಳೆದುಕೊಳ್ಳುತ್ತಾರೆ ಎಂದು ವಿಧಾನಸೌಧ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.
ದಿನೇಶ್ ಕಲ್ಲಳ್ಳಿ ದೂರಿನಿಂದ ಈ ಹಿಂದೆ ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ದಿನೇಶ್ ಕಲ್ಲಳ್ಳಿ ದೂರು ನೀಡಿದ್ದು, ಆ ದೂರಿನನ್ವಯವೇ ರಮೇಶ್ ಜಾರಕಿಹೊಳಿ ಮಂತ್ರಿ ಪದವಿ ಕಳೆದುಕೊಂಡಿದ್ರು. ಬಿಜೆಪಿ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ನಾಗೇಶ್ ಕೂಡ ಅಕ್ರಮ ಆರೋಪದ ಹಿನ್ನೆಲೆ ರಾಜೀನಾಮೆ ನೀಡಿದ್ರು. ಇದೀಗ ತಿಮ್ಮಾಪುರ ಕೂಡ ತಮ್ಮ ಸಚಿವ ಸ್ಥಾನ ಕಳೆದುಕೊಳ್ತಾರಾ?

Comments (0)

Your email address will not be published. Required fields are marked *

Back to top button