
ಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3500 ರೂ. ದರ ಘೋಷಣೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಬೆಳಗಾವಿಯಲ್ಲಿ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಇಂದು ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದೆ..
ರೈತರು ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿಗಳ ಬೆಲೆಗೆ ಆಗ್ರಹಿಸಿದ್ದಾರೆ. ಆದರೆ, ಸಕ್ಕರೆ ಕಂಪನಿ ಮಾಲೀಕರು ಈ ಬೇಡಿಕೆಯನ್ನು ತಿರಸ್ಕರಿಸಿದ್ದು, 3,500 ರೂಪಾಯಿ ನೀಡಿದರೆ ಭಾರಿ ನಷ್ಟವಾಗುತ್ತದೆ ಎಂದು ವಾದಿಸಿದ್ದಾರೆ. ಸಭೆಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಆರ್.ಬಿ. ತಿಮ್ಮಾಪೂರ, ಲಕ್ಷ್ಮಿ ಹೆಬ್ಬಾಳ್ಕರ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮುರುಗೇಶ್ ನಿರಾಣಿ, ರಾಜು ಅಸಿಫ್ ಸೇಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
38ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಆಡಳಿತ ಮಂಡಳಿಯ ಪ್ರತಿನಿಧಿಗಳು ಭಾಗಿಯಾಗಿದ್ದು, ಸಭೆಯ ಆರಂಭದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ವಾದ ಮಂಡಿಸಿದ್ದು, ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿ ಉತ್ತಮ ಆಗಲು ರಾಜ್ಯ ಸರ್ಕಾರ ಸಹಕರಿಸಬೇಕು, ಜೊತೆಗೆ ಕಾರ್ಖಾನೆಗಳಿಂದ ಖರೀದಿ ಮಾಡುವ ವಿದ್ಯುತ್ ದರ ಪ್ರತಿ ಯೂನಿಟ್ಗೆ 5.50 ರೂ. ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.
ಕಬ್ಬಿಗೆ ನೀಡಬಹುದಾದ ಬೆಲೆ ಮತ್ತು ರೈತರಿಗೆ ನ್ಯಾಯವಾದ ಪರಿಹಾರ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಕಾರ್ಖಾನೆ ಮಾಲೀಕರೊಂದಿಗೆ ಚರ್ಚೆ ನಡೆಸಿದ್ದು, ಸರ್ಕಾರ ಪ್ರತಿ ಟನ್ ಕಬ್ಬಿಗೆ 3,300 ರೂಪಾಯಿಗಳನ್ನು ನಿಗದಿಪಡಿಸಲು ಪ್ರಯತ್ನಿಸಿದೆ. ಆದರೂ ಕಾರ್ಖಾನೆಯವರು 3,200 ರೂಪಾಯಿಗಳಿಗಿಂತ ಹೆಚ್ಚು ನೀಡಲು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೇ, ಸಕ್ಕರೆ ದರ ಏರಿಕೆ ಮಾಡಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತರಬೇಕು. ವಾಣಿಜ್ಯ ಮತ್ತು ಗೃಹ ಬಳಕೆ ಸಕ್ಕರೆ ಪ್ರತ್ಯೇಕವಾಗಿ ದರ ಏರಿಕೆ ಮಾಡಬೇಕು. ಎಥೆನಾಲ್ ಹಂಚಿಕೆ ಪ್ರಮಾಣದಲ್ಲಿ ಏರಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆಂದು ತಿಳಿದುಬಂದಿದೆ.




