ರಾಜಕೀಯರಾಜ್ಯಸುದ್ದಿ

ಬೆಂಗಳೂರು ದಕ್ಷಿಣ ಕ್ಷೇತ್ರದ ಜನರಿಗೆ ಕುಡಿಯುವ ನೀರು ಪೂರೈಸಲು ಅಧಿಕಾರಿಗಳಿಗೆ ಡಿಕೆಶಿ ಸೂಚನೆ

ಬೆಂಗಳೂರು, ಜ. 11: ಮೂರ್ನಾಲ್ಕು ತಿಂಗಳುಗಳಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರಿಗೆ ಕುಡಿಯಲು ಕಾವೇರಿ ನೀರನ್ನು ಪೂರೈಸಬೇಕು ಎಂದು ಡಿಸಿಎಂ ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಲಚೇನಹಳ್ಳಿಯಲ್ಲಿ ಗುರುವಾರ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್ ಅವರು ಸಂಸದರಾದ ಡಿ.ಕೆ. ಸುರೇಶ್ ಅವರು ಈ ಭಾಗದ ಟ್ರಾಫಿಕ್ ಸಮಸ್ಯೆ ಹಾಗು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಕ್ಷೇತ್ರದ ಜನರಿಗೆ ಕುಡಿಯಲು ಕಾವೇರಿ ನೀರನ್ನು ಪೂರೈಸಬೇಕು ಎಂಬುದು ಸುರೇಶ್ ಅವರ ಸಂಕಲ್ಪ ಎಂದರು.

ಬಿಡಿಎ ಹಾಗೂ ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳು ಈ ಭಾಗದ ಜನರಿಗೆ ಕುಡಿಯಲು ಕಾವೇರಿ ನೀರು ಪೂರೈಸುವತ್ತ ಆದ್ಯತೆ ನೀಡಬೇಕು ಎಂದು ಸೂಚಿಸುತ್ತೇನೆ. ಎಲ್ಲೂ ನ್ಯಾಯ ಸಿಗದಿದ್ದಾಗ ಮಾತ್ರ ಜನ ನಮ್ಮ ಬಳಿ ಬರುತ್ತಾರೆ. ಹೀಗಾಗಿ ಜನರ ಸಮಸ್ಯೆಗೆ ಅಧಿಕಾರಿಗಳಿಂದ ಪರಿಹಾರ ಕೊಡಿಸುವ ಉದ್ದೇಶದಿಂದ ನಾನು ಇಂದು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ಈ ತಿಂಗಳು ಬೆಂಗಳೂರಿನ ಎಲ್ಲಾ ಕ್ಷೇತ್ರಗಳ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಿಮ್ಮ ಸಮಸ್ಯೆ ಆಲಿಸಲು ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಯ 500 ಅಧಿಕಾರಿಗಳು ಇಲ್ಲಿದ್ದಾರೆ. ನೀವು ನನಗೆ ಅಹವಾಲು ನೀಡುವುದಕ್ಕಿಂದ ಮುಖ್ಯವಾಗಿ ನೀವು ನಿಮ್ಮ ಅಹವಾಲುಗಳನ್ನು ನೋಂದಣಿ ಮಾಡಿಸಬೇಕು. ಜತೆಗೆ ನಿಮ್ಮ ದೂರವಾಣಿ ಸಂಖ್ಯೆಯನ್ನು ಕೂಡ ನಮೂದಿಸುವುದು ಬಹಳ ಮುಖ್ಯ. ಇದರಿಂದ ಅಧಿಕಾರಿಗಳು ಮತ್ತೆ ನಿಮ್ಮನ್ನು ಸಂಪರ್ಕ ಮಾಡಲು ನೆರವಾಗುತ್ತದೆ ಎಂದು ತಿಳಿಸಿದರು.

ಒಂದೇ ದಿನದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೂ ಕಾನೂನು ಚೌಕಟ್ಟಿನಲ್ಲಿ ನಿಮಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಜನ ಸೇವೆ ಜನಾರ್ದನ ಸೇವೆ ಎಂಬ ಮಾತನ್ನು ನಂಬಿ ಅದರಂತೆ ನಾವು ಕೆಲಸ ಮಾಡುತ್ತಿದ್ದೇವೆ. ಶಿವಕುಮಾರ ಸ್ವಾಮೀಜಿಗಳು, ‘ದೊಡ್ಡವನಾಗಲು ಪ್ರಯತ್ನ ಮಾಡಬೇಡ, ಒಳ್ಳೆಯವನಾಗಲು ಪ್ರಯತ್ನ ಮಾಡು, ಆಗ ತಂತಾನೇ ದೊಡ್ಡವನಾಗುತ್ತೀಯಾ’ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಜನಪರ ಸರ್ಕಾರವಾಗಿ ಕೆಲಸ ಮಾಡುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದರು.

 

Comments (0)

Your email address will not be published. Required fields are marked *

Back to top button