ಜಿಲ್ಲೆ

ಡಾ. ಶಿವಕುಮಾರ ಶ್ರೀ ಜಯಂತಿ; ಶಿಡ್ಲಘಟ್ಟದಲ್ಲಿ ಗುರುವಂದನಾ ಕಾರ್ಯಕ್ರಮ

ಚಿಕ್ಕಬಳ್ಳಾಪುರ: ಬಡವರಿಗೆ ಅನ್ನ, ಅಕ್ಷರ ನೀಡಿ ಬದುಕು ಕಟ್ಟಿಕೊಟ್ಟ, ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಡಾ. ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತ್ಯೋತ್ಸವ ಹಿನ್ನೆಲೆ, ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿ, ದೇವಾಲಯದ ಮುಂಭಾಗದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪ್ರಸಾದ ವಿತರಣೆ ಮಾಡಲಾಯಿತು. ಬಳಿಕ ಶಿಡ್ಲಘಟ್ಟ ನಗರದ ಅರಳೇಪೇಟೆ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ, ಶ್ರೀ ಬಸವೇಶ್ವರ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ, ಜಯಂತ್ಯೋತ್ಸವ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಟ್ರಸ್ಟ್​​ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಚಂದ್ರಶೇಖರ್ ಬಾಬು, ಅಕ್ಷರ ಜ್ನಾನವನ್ನು ಪ್ರತಿ ಹಳ್ಳಿಹಳ್ಳಿಯ ಬಡಮಕ್ಕಳಿಗೆ ಹಂಚುವಲ್ಲಿ, ಶಿವಕುಮಾರ ಸ್ವಾಮೀಜಿ ಮಹೋನ್ನತ ಸಾಧನೆ ಮಾಡಿದ್ದಾರೆ. ಸುಮಾರು ದಶಕಗಳ ಕಾಲ ತ್ರಿವಿಧ ದಾಸೋಹ ನಡೆಸಿದ ಮಹಾನ್ ಚೇತನವನ್ನು ಸದಾ ನೆನಪಿಸಿಕೊಳ್ಳಬೇಕಿದೆ. ಇವರ ಈ ಸೇವೆಯಿಂದ ಬಡಮಕ್ಕಳಿಗೆ ಅಕ್ಷರದ ದಾಸೋಹದ ಜೊತೆ ಅನ್ನ ದಾಸೋಹವೂ ಸಿಕ್ಕಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ನೆರವಾಯಿತು ಎಂದರು.

ಇನ್ನು, ಟ್ರಸ್ಟ್​​ನ ಅಧ್ಯಕ್ಷ ನಂದೀಶ್ ಮಾತನಾಡಿ, ತ್ರಿವಿಧ ದಾಸೋಹಿ, ಬಡಜನರ ದೇವರು ಶಿವಕುಮಾರ ಸ್ವಾಮೀಜಿಯವರ ಬದುಕಿನ ಕಾಲದಲ್ಲಿ, ನಾವಿದ್ದೇವೆ ಅನ್ನೋದು ನಮ್ಮ ಅದೃಷ್ಟ. ಅವರ ಜೀವನದ ಹಾದಿಯಲ್ಲಿ ತಿಳಿಸಿದ ಒಂದೆರಡು ವಿಚಾರವನ್ನ, ನಮ್ಮ ಜೀವನದಲ್ಲಿ ಅಳವಡಿಸಿಕೊಂಡ್ರೆ ಅದೇ ನಮ್ಮ ಸಾರ್ಥಕತೆ ಎಂದು ತಿಳಿಸಿದರು.

Comments (0)

Your email address will not be published. Required fields are marked *

Back to top button