ರಾಜಕೀಯರಾಜ್ಯಸುದ್ದಿ

ಬಲ್ಡೋಟ ಕಂಪನಿ ವಿರುದ್ದ ಜನಾಕ್ರೋಶ; ಫೆ.24 ರಂದು ಕೊಪ್ಪಳ ಬಂದ್ ಗೆ ಕರೆ

ಕೊಪ್ಪಳ: ಕೊಪ್ಪಳದ ಸಮೀಪದಲ್ಲಿ 1 ಸಾವಿರ ಎಕರೆ ಭೂಮಿಯಲ್ಲಿ ಬಲ್ದೋಟ ಕಂಪನಿ ಕಬ್ಬಿಣ ಉತ್ಪಾದನೆ ಕಾರ್ಖಾನೆ ವಿಸ್ತರಣೆಗೆ ಮುಂದಾಗಿದ್ದು, ಈ ಕುರಿತು ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.‌ ಈ ಬೆನ್ನಲ್ಲೇ ಕಾರ್ಖಾನೆ ವಿರೋಧಿ ಹೋರಾಟಗಾರರ ನಿಯೋಗವು ಗವಿಮಠದ ಸ್ವಾಮಿಜಿಯನ್ನು ಭೇಟಿ ಮಾಡಿ ಹೋರಾಟದ ನೇತೃತ್ವ ವಹಿಸಬೇಕೆಂದು ಮನವಿ ಮಾಡಿದ್ದಾರೆ. ಈ ವೇಳೆ ಶ್ರೀಗಳು ಹೋರಾಟಕ್ಕೆ ಬೆಂಬಲ ಸೂಚಿಸಿ, ಸಾಮೂಹಿಕ ನೇತೃತ್ವದಲ್ಲಿ ಹೋರಾಟ ಮಾಡೋಣ ಎಂದಿದ್ದಾರೆ.

ಇನ್ನು ಬಲ್ಡೋಟ ಸಮೂಹದಿಂದ MSPL ಕಾರ್ಖಾನೆ ವಿಸ್ತರಣೆ ಮಾಡದಂತೆ ಒತ್ತಾಯಿಸಿ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಕೇಂದ್ರದ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದರು.

ಶಾಸಕರ ಮನವಿ ಸ್ವೀಕರಿಸಿ ಮಾತನಾಡಿದ್ದ ಕೇಂದ್ರ ಸಚಿವರು ತಮಗೆ ಕೊಪ್ಪಳದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ಇದೆ. ಅಭಿವೃದ್ಧಿಗೆ ಕೈಗಾರಿಕಾ ಘಟಕಗಳ ಸ್ಥಾಪನೆ ಅಗತ್ಯ. ಆದರೆ ಸಮುದಾಯದ ಆರೋಗ್ಯ, ಪರಿಸರ ಹಾಗೂ ಕೃಷಿ ಕ್ಷೇತ್ರಗಳಿಗೆ ಮಾರಕವಾಗುವ ಯಾವುದೇ ಯೋಜನೆಗಳನ್ನು ಒಪ್ಪಲಾಗದು. ಕೊಪ್ಪಳ ಜನತೆಯ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಲಾಗುವುದು. ಬಲ್ಡೋಟ ಸಮೂಹದ ಉದ್ದೇಶಿತ 54,000 ಕೋಟಿ ರೂ‌‌. ವೆಚ್ಚದ ಉಕ್ಕು ಕೈಗಾರಿಕಾ ಘಟಕದ ಸ್ಥಾಪನೆಯ ವಿರುದ್ಧ ವ್ಯಕ್ತವಾಗುತ್ತಿರುವ ವಿರೋಧವನ್ನು ಗಮನದಲ್ಲಿಟ್ಟುಕೊಂಡು ಕೊಪ್ಪಳ ಜನತೆಯ ಬೇಡಿಕೆಗೆ ಸ್ಪಂದಿಸಲು ಸೂಕ್ತ ಕ್ರಮ‌ ಕೈಗೊಳ್ಳುಲಾವುದು ಎಂದು ಭರವಸೆ ನೀಡಿದ್ದರು.

ಒಟ್ನಲ್ಲಿ, ಬಲ್ಡೋಟ ಕಂಪನಿಯ ಕಾರ್ಖಾನೆ ವಿಸ್ತರಣೆಗೆ ಕೊಪ್ಪಳಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದು. ಫೆಬ್ರವರಿ 24 ರಂದು ಕೊಪ್ಪಳ ಪರಿಸರ ಹಿತರಕ್ಷಣ ವೇದಿಕೆಯಿಂದ ಕೊಪ್ಪಳ ಬಂದ್ ಗೆ ಕರೆ ನೀಡಲಾಗಿದೆ.

Comments (0)

Your email address will not be published. Required fields are marked *

Back to top button