ಜಿಲ್ಲೆರಾಜಕೀಯರಾಜ್ಯ

ಸಿಂಹ ಕಟ್ಟಿಹಾಕಲು ಬೋನಿಟ್ಟ ಕಾಂಗ್ರೆಸ್..! ಪ್ರತಾಪ್ ಸಿಂಹ ಕೋಟೆಗೆ ಯತೀಂದ್ರ ಸಾಮ್ರಾಟ?

ಲೋಕ ಯುದ್ಧ ಗೆಲ್ಲಲು ದೇಶದ ಎಲ್ಲ ಪಕ್ಷಗಳು ಸಮರಭ್ಯಾಸದಲ್ಲಿವೆ. ಅಸ್ತಿತ್ವಕ್ಕಾಗಿ ನಾನಾ ತಂತ್ರ ಪ್ರತಿತಂತ್ರಗಳ ಸೂತ್ರಗಳನ್ನ ಹೆಣೆದು ರಾಜ್ಯ ಕಾಂಗ್ರೆಸ್ ಸದ್ದಿಲ್ಲದೆ ಮೈಸೂರು ಕೊಡಗು ಲೋಕ ಸಭಾ ಕ್ಷೇತ್ರಕ್ಕಾಗಿ ತೆರೆ ಮರೆಯಲ್ಲಿ ಭಾರಿ ಕಸರತ್ತು ನಡೆಸುತ್ತಿದೆ. ಹಾಲಿ ಸಂಸದ ಪ್ರತಾಪ್ ಸಿಂಹ ಕೋಟೆಗೆ ಸಿಎಂ ಸಿದ್ದರಾಮಯ್ಯ ಮಗನೆ ಮುಂದಿನ ಸಾಮ್ರಾಟ ಎಂದು ಕಾಂಗ್ರೆಸ್ ನಿರ್ಧಾರ ಮಾಡಿದಂತಿದೆ. ಹಾಗಾಗಿ ಪ್ರತಾಪ್ ಸಿಂಹರ ಹುಳುಕು ,ಎಡವಟ್ಟು ,ತಪ್ಪುಗಳನ್ನ ಹುಡುಕಿ ಅದನ್ನೇ ವೈಭವೀಕರಿಸಿ ಕಾಂಗ್ರೆಸ್ ರಾಜಕೀಯ ಮಾಡುವುದರ ಜೊತೆಗೆ ಪ್ರತಾಪ್ ಸಿಂಹರ ಮೇಲಿರೋ ಜನರ ಸೆಳೆತವನ್ನ ಹಂತ ಹಂತವಾಗಿ ನಿಷ್ಕ್ರಿಯ ಗೊಳಿಸುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರು ಪರೋಕ್ಷವಾಗಿ ಆರೋಪ ಮಾಡುತ್ತಿದ್ದಾರೆ.

ಪಾರ್ಲಿಮೆಂಟ್ ಒಳಗೆ ಸಿಡಿಸಿದ ಸ್ಮೋಕ್ ಬಾಂಬ್ ವಿಚಾರದಲ್ಲೂ ನನ್ನನ್ನ ದೇಶದ್ರೋಹಿಯೆಂದು ಕಾಂಗ್ರೆಸ್ ಬಿಂಬಿಸಿ ರಾಜಕೀಯ ಲಾಭ ಪಡೆದುಕೊಂಡಿದ್ದಲ್ಲದೆ ಸಿಎಂ ಸಿದ್ಧರಾಮಯ್ಯ ನನ್ನ ಚಾರಿತ್ರ್ಯ ಹರಣ ಮಾಡುವುದರೊಂದಿಗೆ ತನ್ನ ಮಗನ ಭವಿಷ್ಯವನ್ನ ರೂಪಿಸುತ್ತಿದ್ದಾರೆ ಎಂದು ಭಾವುಕರಾಗೇ ಸಂಸದ ಪ್ರತಾಪ್ ಸಿಂಹ ಹೇಳಿದ್ದರು
ಇತ್ತೀಚೆಗಿನ ಮರ ಸಾಗಾಣಿಕೆ ಪ್ರಕರಣದಲ್ಲಿ ವಿಕ್ರಂ ಸಿಂಹರ ಬಂಧನ ರಾಜಕೀಯದ ಭಾಗ ಎಂದಿರೋ ಸಂಸದ, ಸಿಎಂ ಸಿದ್ಧರಾಮಯ್ಯರ ವಿರುದ್ಧ ರೋಷಾವೇಶದಿಂದ ಗುಡುಗಿದರು,ಮರ ಸಾಗಾಣಿಕೆ ಪ್ರಕರಣ ಸಂಬಂಧ ಸಂಸದ ಸಹೋದರನ ಬಂಧನ ಬೆನ್ನಲ್ಲೇ ರಾಜ್ಯ ಕೇಸರಿ ಪಾಳಯ ಜಂಘಾ ಬಲ ಕುಸಿದವರಂತೆ ರಾಜ್ಯ ಕಾಂಗ್ರೆಸ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿತ್ತು.

ಬಿಜೆಪಿ ಸಂಸದನನ್ನ ಟಾರ್ಗೆಟ್ ಮಾಡಿ ,ರಾಜಕೀಯ ಪ್ರೇರಿತ ಪ್ರಕರಣಕ್ಕೆ ವಿಕ್ರಂ ಸಿಂಹರನ್ನ ಬಂಧಿಸಲಾಗಿದೆ ಎಂದು ಬಿಜೆಪಿ, ಕಾಂಗ್ರೆಸ್ ವಿರುದ್ಧ ಗುಡುಗಿತ್ತು. ತಮ್ಮನ ಬಂಧನದ ಬಗ್ಗೆ ಭಾವುಕರಾದ ಸಂಸದ ಪ್ರತಾಪ್ ಸಿಂಹ ನನ್ನ ವಯೋವೃದ್ಧೆ ತಾಯಿಯನ್ನು ಬಂಧಿಸಿ ಬಿಡಿ ನನ್ನ ತಂಗಿಯನ್ನು ಅರೆಸ್ಟ್ ಮಾಡಿ , ಸುಖಾ ಸುಮ್ಮನೆ ನನ್ನ ತಮ್ಮ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಅಧಿಕಾರ ದುರುಪಯೋಗ ಪಡಿಸಿಕೊಂಡು ವಿಕೃತವಾಗಿ ವರ್ತಿಸುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದು ವಿರುದ್ಧ ಹರಿಹಾಯ್ದರು.
೨೦೨೪ ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಉಳಿದಿವೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್​ ರಾಜ್ಯದಲ್ಲಿ ಬಿಜೆಪಿಗೆ ಠಕ್ಕರ್​ ಕೊಡಲು ಯೋಜನೆ ರೂಪಿಸಿಕೊಳ್ಳುತ್ತಿದೆ. ಮುಂಬರುವ ಚುನಾವಣೆಯಲ್ಲಿ 2018ರ ಚುನಾವಣೆಯಂತೆ ಅಭೂತಪೂರ್ವ ಗೆಲುವು ಸಾಧಿಸಿ ದೇಶಕ್ಕೆ 3ನೇ ಬಾರಿಗೆ ನರೇಂದ್ರ ಮೋದಿಯನ್ನ ಪ್ರಧಾನಿ ಮಾಡಲು ರಾಜ್ಯದಿಂದ ಅಧಿಕ ಸ್ಥಾನಗಳನ್ನು ಕೊಡುಗೆಯಾಗಿ ನೀಡಲು ಬಿಜೆಪಿ ಕೂಡ ಸಜ್ಜಾಗುತ್ತಿದೆ. ಹೀಗೆ ರೋಚಕವಾಗಿ ಲೋಕಸಭಾ ಚುನಾವಣೆಯ ಕುರಿತು ಫ್ರೀಡಂ ಟಿವಿ ದಿನಕ್ಕೊಂದು ಲೋಕಸಭ ಕ್ಷೇತ್ರದ ಲೆಕ್ಕಾಚಾರ ಬಿಡಿಸಿಡುವ ಪ್ರಯತ್ನ ಮಾಡುತ್ತಿದೆ.

ಈಗಾಗಲೇ ಎರಡು ಬಾರಿ ಗೆದ್ದಿರುವ ಪ್ರತಾಪ್ ಸಿಂಹರನ್ನ ಹೇಗಾದ್ರು ಮಾಡಿ ಸೋಲಿಸಿ ಕಾಂಗ್ರೆಸ್ ಮೈಸೂರು ಕೊಡಗು ಕ್ಷೇತ್ರವನ್ನ ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಳ್ಳಬೇಕು ಅನ್ನೋ ಹಠಕ್ಕೆ ಬಿದ್ದಂತಿದೆ. ಕಾಂಗ್ರೆಸ್ ಅನೇಕ ಸೂತ್ರಗಳನ್ನ ಹೆಣೆಯುತ್ತಿದೆ ಅಂದ ಹಾಗೆ ಹಾಲಿ ಸಂಸದನ ವಿರುದ್ಧ ಕಣಕ್ಕಿಳಿಸೋ ಅಭ್ಯರ್ಥಿ ಅಷ್ಟೇ ಬಲಿಷ್ಠವಾಗಿರಬೇಕು ಅನ್ನೋ ಪ್ರಶ್ನೆಯು ಕಾಂಗ್ರೆಸ್ ಪಕ್ಷವನ್ನ ಕಾಡುತ್ತಿರೋದು ಸುಳ್ಳಲ್ಲ. ಸಿಎಂ ಸಿದ್ದರಾಮಯ್ಯ ಅವರ ಸ್ವ-ಕ್ಷೇತ್ರ ಆಗಿರುವುದರಿಂದ ಇದು ಸಿದ್ದರಾಮಯ್ಯರ ಪ್ರತಿಷ್ಠೆಯ ಪ್ರಶ್ನೆಯೂ ಹೌದು . ರಾಜ್ಯದ ಅಧಿಕಾರ ಹಿಡಿದ ಕಾಂಗ್ರೆಸ್ ನನ್ನ ಮಗನನ್ನು ಕೈ ಹಿಡಿದಿಯಾರು ಎಂಬ ಸಣ್ಣ ಭರವಸೆ ಸಿಎಂಗೆ ಇರೋದು ಸುಳ್ಳಲ್ಲ ,ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೂ ಈ ಬಾರಿ ಪ್ರತಾಪ್ ಸಿಂಹ ಕ್ಷೇತ್ರದಲ್ಲಿ ಕಣಕ್ಕಿಳಿಯೋದು ಯತೀಂದ್ರ ಸಿದ್ದರಾಮಯ್ಯ ಅನ್ನೋದು ನಿಸ್ಸಂದೇಹ ಎಂದು ಹೇಳಲಾಗುತ್ತಿದೆ .ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಂತ ಸಂಪರ್ಕ ಕ್ರಾಂತಿಯ ಅಭಿವೃದ್ಧಿ ಅಸ್ತ್ರವನ್ನ ಇಟ್ಟುಕೊಂಡಿರೋ ಹಾಲಿ ಸಂಸದರ ವಿರುದ್ಧ ತೊಡೆ ತಟ್ಟಲು ಯತೀಂದ್ರ ಸನ್ನದ್ಧರೇ ಅನ್ನೋ ಪ್ರಶ್ನೆಯು ಜನ್ರನ್ನ ಕಾಡುತ್ತಿದೆ.

Comments (0)

Your email address will not be published. Required fields are marked *

Back to top button