ರಾಜಕೀಯರಾಜ್ಯಸುದ್ದಿ

ವಿಜಯಪುರದಲ್ಲಿ ಬಿಜೆಪಿಗೆ ಬಂಡಾಯದ ಬೇಗುದಿ : ರಮೇಶ ಜಿಗಜಿಣಗಿ ವಿರುದ್ಧ ಡಾ. ಬಾಬುರಾಜೇಂದ್ರ ನಾಯಿಕ್ ಸ್ಪರ್ಧೆ ?

ವಿಜಯಪುರ : ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ‌ ಹಾಲಿ ಸಂಸದ ರಮೇಶ ಜಿಗಜಿಣಗಿಗೆ ಬಿಜೆಪಿ ಟಿಕೇಟ್ ಘೋಷಣೆಯಾದ ಬೆನ್ನಲ್ಲೇ ವಿಜಯಪುರ ಜಿಲ್ಲಾ‌ ಬಿಜೆಪಿಯಲ್ಲಿ ಬಂಡಾಯದ ಬೇಗುದಿ‌ ಸ್ಪೋಟಗೊಂಡಿದೆ. ಬಿಜೆಪಿ‌ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ, ಖ್ಯಾತ ವೈದ್ಯ, ಹಾಗೂ ಬಂಜಾರಾ ಸಮುದಾಯದ ಮುಖಂಡ ಡಾ.ಬಾಬುರಾಜೇಂದ್ರ ನಾಯಿಕ್ ಮಧ್ಯದ ಸಂಬಂಧದಲ್ಲಿ ಬಿರುಕು ಬಿಟ್ಟಿದೆ. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವಿರುದ್ಧ ಸ್ಪರ್ಧಿಸಲಿಕ್ಕೆ ಮುಂದಾಗಿದ್ದಾರೆ. ಇದರಿಂದ ವಿಜಯಪುರ ಜಿಲ್ಲೆಯಲ್ಲಿ ತೀವ್ರ ಚರ್ಚೆ ಶುರುವಾಗಿದೆ.

ರಮೇಶ ಜಿಗಜಣಗಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅಸಮಾಧಾನಗೊಂಡಿರುವ, ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಬಾಬುರಾಜೇಂದ್ರ ನಾಯಿಕ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯಪುರ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರ ನೆಲೆಯಾಗಿತ್ತು. ವಿಜಯಪುರದ ಜನತೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಿರಂತರವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಕಳೆದ ಮೂರು ಅವಧಿಯಲ್ಲಿ ಸಂಸದರಾಗಿದ್ದ ರಮೇಶ ಜಿಗಜಿಣಗಿಯವರು ಯಾವುದೇ ಅಭಿವೃದ್ಧಿ ನಡೆಸದಿದ್ದರೂ, ಮೋದಿಯವರಿಗಾಗಿ ಜನತೆ ಅವರಿಗೆ ಮತ ಚಲಾಯಿಸಿದ್ದಾರೆ.

ಆದರೆ, ಈ ಬಾರಿಯಾದರೂ ಅಭ್ಯರ್ಥಿ ಬದಲಾಯಿಸಿ, ವಿಜಯಪುರದ ಅಭಿವೃದ್ಧಿಗೆ ಪಕ್ಷ ನೆರವಾಗಬೇಕು ಎನ್ನುವುದು ಜನತೆಯ ಬೇಡಿಕೆಯಾಗಿತ್ತು. ಆದರೆ, ಕೊನೆಯ ಹಂತದಲ್ಲಿ, ನನ್ನ ಬದಲಿಗೆ ಮರಳಿ ಆಡಳಿತ ವಿರೋಧಿ ಅಲೆಯ ಪರಾಕಾಷ್ಠೆಯನ್ನು ಎದುರಿಸುತ್ತಿರುವ ಹಾಲಿ ಸಂಸದರಿಗೆ ಮರಳಿ ಟಿಕೆಟ್ ಘೋಷಿಸಲಾಗಿದೆ. ಇದು ವಿಜಯಪುರದ ಜನತೆಗೆ ಆಘಾತಕಾರಿಯಾಗಿ ಪರಿಣಮಿಸಿದೆ ಎಂದು ಗುಡುಗಿದ್ದಾರೆ.

ಅಸಮರ್ಥ ಅಭ್ಯರ್ಥಿ ವಿರುದ್ಧ ನನ್ನ ಸ್ಪರ್ಧೆ : ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ವಿಕಸಿತ ಭಾರತ ಸಂಕಲ್ಪ ಹಾಗೂ ದೇಶವನ್ನು ವಿಶ್ವ ಗುರುವನ್ನಾಗಿ ಮಾಡುವ ಗುರಿ ತಲುಪಲು ಅವರೊಂದಿಗೆ ಅವರ ವೇಗಕ್ಕೆ ಸರಿಸಾಟಿಯಾಗಿ ಸಾಥ್ ಕೊಡುವಂತಹ ಸಂಸದರು ತಂಡಕ್ಕೆ ಅವಶ್ಯಕವಾಗಿದೆ. ವಿಕಸಿತ ಭಾರತವಾಗಲು ವಿಕಸಿತ ವಿಜಯಪುರವಾಗಬೇಕು, ಸಮಗ್ರ ವಿಜಯಪುರ ಅಭಿವೃದ್ಧಿಯತ್ತ ದಾಪುಗಾಲಿಡಲು ನಾನು ನನ್ನ ಅಭ್ಯರ್ಥಿತನವನ್ನು ಪ್ರತಿಪಾದಿಸಿದ್ದೆ.

ಆದರೆ ಕೆಲವರ ಷಡ್ಯಂತರದಿಂದ ನನಗೆ ಟಿಕೆಟ್ ತಪ್ಪಿದೆ. ಇದನ್ನು ನಾನು‌ ಗಟ್ಟಿಯಾಗಿ ವಿರೋಧಿಸಿ ಅಸಮರ್ಥ ಅಭ್ಯರ್ಥಿ ರಮೇಶ ಜಿಗಜಿಣಗಿ ವಿರುದ್ಧ ಸ್ಪರ್ಧಿಸುವ ನಿರ್ಧಾರ ಮಾಡಿದ್ದೇನೆ. ನನ್ನ ವಿರೋಧ ಬಿಜೆಪಿಯ ಅಸಮರ್ಥ ಅಭ್ಯರ್ಥಿ ರಮೇಶ ಜಿಗಜಿಣಗಿ ವಿರುದ್ಧವೇ ಹೊರತು ಪಕ್ಷದ ಹಾಗೂ ಪಕ್ಷದ ಹಿರಿಯರ ವಿರುದ್ಧವಲ್ಲ ಎಂದು ನಾಯಿಕ್ ಸ್ಪಷ್ಟಪಡಿಸಿದ್ದಾರೆ.

ಜಿಗಜಿಣಗಿ ತಾಕ್ಕತ್ತಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲಿ :ನನ್ನ ಬಂಡಾಯ ಹಾಗೂ ಅಸಮಾಧಾನ ಶಮನ ಮಾಡಲು ಬರುವ ಪಕ್ಷದ ಹಿರಿಯರಿಗೆ ನನ್ನದೊಂದೇ ಮಾತು. ಅಭ್ಯರ್ಥಿಯ ಬದಲಾವಣೆಯೇ ನನ್ನ ಷರತ್ತು. ಅಭ್ಯರ್ಥಿ ಬದಲಾಯಿಸಿದರೆ ನಾನು ಮುಂದುವರೆಯುತ್ತೇನೆ. ರಮೇಶ ಜಿಗಜಿಣಗಿ ಇಲ್ಲಿಯವರೆಗೂ ಸ್ವಪ್ರಯತ್ನ, ಸಾಮರ್ಥ್ಯದಿಂದ ಕನಿಷ್ಠ ಒಂದು‌ ಚರಂಡಿ ಕಾಮಗಾರಿಯೂ ತಂದಿಲ್ಲ. ಕೇವಲ ಪತ್ರಗಳನ್ನು ಬರೆಯುವುದರಿಂದ ಕೆಲಸಗಳಾಗುವುದಿಲ್ಲ.

ಇವರಿಗೆ ತಾಕತ್ ಇದ್ದರೆ ಕಮಲ ಚಿಹ್ನೆ ಹೊರತುಪಡಿಸಿ ಸ್ಪರ್ಧಿಸಲಿ. ಆಗ ಇವರ ಸಾಮರ್ಥ್ಯ ಗೊತ್ತಾಗುತ್ತದೆ ಎಂದು ಅವರು ಸವಾಲು ಹಾಕಿದ್ದಾರೆ. ಬಂಜಾರ ಸಮಾಜಕ್ಕಾಗಿರುವ ರಾಜಕೀಯ ಅನ್ಯಾಯಕ್ಕೆ ಸಮಾಜ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದೆ ಎಂದು ಡಾ.ಬಾಬುರಾಜೇಂದ್ರ ನಾಯಿಕ್ ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಬಂಜಾರ ಸಮುದಾಯವನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ : ವಿಜಯಪುರ ಜಿಲ್ಲೆಯಲ್ಲಿ‌ ಬಂಜಾರ ಸಮುದಾಯವನ್ನು‌ ಕಳೆದ ಮೂರು ದಶಕಗಳಿಂದ ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಹುನ್ನಾರ ನಿರಂತರವಾಗಿ ನಡೆದಿದೆ. ಬಂಜಾರಾ ಸಮುದಾಯದ ಅಭ್ಯರ್ಥಿ ಯಾವುದೇ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸಿದರೆ ಅವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತರ ಕಳೆದ ದಶಕಗಳಿಂದಾಗುತ್ತಿದೆ. ಬಂಜಾರ ಸಮುದಾಯ ಅದನ್ನು ಸೂಕ್ಷ್ಮವಾಗಿ ಅವಲೋಕಿಸಿ ಈ‌ ಬಾರಿ ಅದಕ್ಕೆ ಅವಕಾಶ ಕೊಡಬಾರದೆಂದು ಸಮಾಜ ನಿರ್ಧರಿಸಿದೆ.

ಕಳೆದ ಕೆಲವು ದಿನಗಳಿಂದ ನಮ್ಮ‌ ಬಂಜಾರಾ ಸಮಾಜವಷ್ಟೇ ಅಲ್ಲದೇ ಇತರೆ ಸಮಾಜಗಳ ಸಂತ ಮಹಾಂತರು, ಪ್ರಮುಖರು ಕರೆ‌ಮಾಡಿ ಅಸಮರ್ಥ ವ್ಯಕ್ತಿ ನಮಗೆ ಬೇಡ, ನಿಮಂತಹ ಪ್ರಬುದ್ಧ, ಸಮರ್ಥ ವ್ಯಕ್ತಿ ನಮಗೆ ಬೇಕು ಎಂದು ಸಾಂತ್ವಾನ ಹೇಳಿ ನನಗಾಗಿರುವ ಅನ್ಯಾಯದ ವಿರುದ್ಧ ನನ್ನ ಬೆನ್ನಿಗೆ ನಿಲ್ಲುವುದಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

Comments (0)

Your email address will not be published. Required fields are marked *

Back to top button