ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಕನ್ನಡ ಬಿಗ್ ಬಾಸ್ -12 ಇದೀಗ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಜಾಲಿವುಡ್ ಸ್ಟುಡಿಯೋದ 35 ಎಕರೆ ಪ್ರದೇಶದಲ್ಲಿರುವ ಪ್ರತ್ಯೇಕ ಸೆಟ್‌ನಲ್ಲಿ ಈ ಶೋ ನಡೆಯುತ್ತಿದ್ದು, ಅಗತ್ಯ ಅನುಮತಿಗಳಿಲ್ಲದೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಈಗಾಗಲೇ ನೋಟಿಸ್ ಜಾರಿಯಾಗಿದ್ದು, ಇದೀಗ ಪೊಲೀಸ್ ಇಲಾಖೆಯಿಂದಲೂ ಅನುಮತಿ ಪಡೆಯದಿರುವ ಕಾರಣಕ್ಕೆ ಮತ್ತೊಂದು ನೋಟಿಸ್ ನೀಡಲಾಗಿದೆ. ಕನ್ನಡ ಬಿಗ್ ಬಾಸ್ ಶೋಗೆ ಸಂಬಂಧಿಸಿದಂತೆ ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿಯಮ ಉಲ್ಲಂಘನೆಯ ಆರೋಪದ ಮೇಲೆ ನೋಟಿಸ್ ಜಾರಿಯಾಗಿತ್ತು.
ಈಗ, ಶೋ ನಡೆಸಲು ಸ್ಥಳೀಯ ಪೊಲೀಸ್ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯದಿರುವುದು ತಿಳಿದುಬಂದಿದೆ. ಜಾಲಿವುಡ್ ಸ್ಟುಡಿಯೋದಲ್ಲಿ ಶೋ ಚಿತ್ರೀಕರಣಕ್ಕೆ ಅಗತ್ಯವಾದ ಕಾನೂನುಬದ್ಧ ಅನುಮತಿಗಳನ್ನು ಪಡೆಯದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಶೋನ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ. ಸ್ಟುಡಿಯೋದಲ್ಲಿ ಈಗಾಗಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸೂಚನೆಯೂ ನೀಡಲಾಗಿತ್ತು. ಇದೀಗ ಪೊಲೀಸ್ ಅನುಮತಿ ಇಲ್ಲದಿರುವ ಕಾರಣಕ್ಕೆ ಮತ್ತೊಂದು ನೋಟಿಸ್ ಜಾರಿಯಾಗಿದೆ.


