ಬೆಂಗಳೂರು: ರಾಜ್ಯದ ಹೆಡ್ ಕಾನ್ಸ್ ಸ್ಟೆಬಲ್ ಗಳು, ಕಾನ್ ಸ್ಟೆಬಲ್ ಗಳು ಧರಿಸುತ್ತಿರುವ ಸ್ಲೋಚ್ ಹ್ಯಾಟ್ ಬದಲಾಗಿ ನೇವಿ ಬ್ಲೂ ಪೀಕ್ ಕ್ಯಾಪ್ ಗಳಿಗೆ ಇಂದಿನಿಂದ ಪರಿವರ್ತನೆಗೊಂಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಪೊಲೀಸ್ ಸಿಬ್ಬಂದಿ ಪೀಕ್ ಕ್ಯಾಪ್ ಪರಿಚಯ ಮತ್ತು ವಿತರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಸಿಬ್ಬಂದಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಪರಮೇಶ್ವರ್ ಅವರು ಸಾಂಕೇತಿಕವಾಗಿ ನೀಲಿ ಬಣ್ಣದ ಪೀಕ್ ಕ್ಯಾಪ್ ವಿತರಿಸಿದರು..

ಯಾವುದೇ ಸರ್ಕಾರ ಬಂದರೂ ನಿಮ್ಮ ಆತ್ಮವಿಶ್ವಾಸ ಹಾಗೂ ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬಾರದು. ಒಂದು ವೇಳೆ ರಾಜಿ ಮಾಡಿಕೊಂಡರೆ ಸಂಪೂರ್ಣವಾಗಿ ವ್ಯವಸ್ಥೆ ಕುಸಿಯಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ , ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದಾರೆ. ಪೀಕ್ ಕ್ಯಾಪ್ ಪರಿಚಯ ಮತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜ ಹಾಗೂ ಸರ್ಕಾರ ಪೊಲೀಸರ ಮೇಲೆ ಬಹಳ ವಿಶ್ವಾಸ ಇಟ್ಟಿರುತ್ತದೆ. ನೀವೇ ಸಮಾಜ ರಕ್ಷಕರು. ನಾವು ಅಧಿಕಾರಕ್ಕೆ ಬಂದು ಪ್ರಮಾಣ ವಚನ ಸ್ವೀಕಾರ ಮಾಡುವ ವೇಳೆ ನಾನು ಸ್ವಲ್ಪ ಖಾರವಾಗಿಯೇ ಮಾತನಾಡಿದ್ದೆ ಎಂದಿದ್ದಾರೆ.

ಇಂದು ನೀವೆಲ್ಲರೂ ನಿಮ್ಮ ಸಮವಸ್ತ್ರವನ್ನು ಶಿಸ್ತಿನಿಂದ ಧರಿಸಿ, ಆತ್ಮವಿಶ್ವಾಸದಲ್ಲಿ ಕೂತಿದ್ದೀರಿ. ಆದರೆ ಕಳೆದ ಸರ್ಕಾರದ ಅವಧಿಯಲ್ಲಿ ಆಯುಧಪೂಜೆ ಸಂದರ್ಭ ಕೆಲವರು ವಿಜಯಪುರ ಹಾಗೂ ಉಡುಪಿಯಲ್ಲಿ ಸಮವಸ್ತ್ರ ತೆಗೆದು ಕೇಸರಿ ವಸ್ತ್ರ ಧರಿಸಿದ್ದರು. ರಾಜಕೀಯ ಒತ್ತಡ ಅಥವಾ ಬೇರೆಯವರನ್ನು ಮೆಚ್ಚಿಸಲು ಈ ರೀತಿ ಮಾಡಿದರೆ ನಿಮ್ಮನ್ನು ನೀವು ಮಾರಿಕೊಂಡಂತೆ. ನಿಮ್ಮ ವ್ಯಕ್ತಿತ್ವ, ಇಲಾಖೆಗೆ ಇರುವ ಘನತೆ ನಾಶವಾಗುತ್ತದೆ. ನೀವುಗಳು ರಾಜಕೀಯ ಹಿಂಬಾಲಕರಾಗುತ್ತೀರಿ. ಆಗ ನಿಮ್ಮನ್ನು ಯಾರು ನಂಬುತ್ತಾರೆ? ಹೀಗಾಗಿ ಇಂತಹ ಪದ್ಧತಿಗೆ ನೀವು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬೇಡಿ ಎಂದು ನುಡಿದಿದ್ದಾರೆ.

ಇನ್ನು ಪೊಲೀಸ್ ಅಧಿಕಾರಿಗಳಿಗೆ ಆತ್ಮವಿಶ್ವಾಸ ಮೂಡಿಸಲು ಐತಿಹಾಸಿಕ ತೀರ್ಮಾನ ಮಾಡಲಾಗಿದೆ. ನಿಮಗೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಗಡಿಯಲ್ಲಿ ಸೈನಿಕ, ಗಡಿಯೊಳಗೆ ಆರಕ್ಷಕ. ಇವರಿಬ್ಬರೂ ನಮ್ಮ ನಾಡಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ನುಡಿದಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆ ಎಂದರೆ ಬಹಳ ಗೌರವ ಪಡೆದಿದೆ. ನಾನು ಇತ್ತೀಚೆಗೆ ಹಿರಿಯ ವಕೀಲರು, ನ್ಯಾಯಾಧೀಶರನ್ನು ಭೇಟಿ ಮಾಡಿದಾಗ ನಮ್ಮ ರಾಜ್ಯದ ಅನೇಕ ಘಟನೆಗಳ ವಿಚಾರವಾಗಿ ಸರ್ಕಾರ ಎಸ್‌ಐಟಿ ರಚನೆ ಮಾಡಿ ಅವರು ತೆಗೆದುಕೊಂಡಿರುವ ನಿರ್ಧಾರ, ವರದಿ ಹಾಗೂ ನ್ಯಾಯಾಲಯ ಕೊಟ್ಟಿರುವ ತೀರ್ಪು ನೋಡಿ ಅವರು ಬಹಳ ಪ್ರಶಂಸೆ ವ್ಯಕ್ತಪಡಿಸಿದ್ದರು. ನಮ್ಮ ಪೊಲೀಸ್ ಅಧಿಕಾರಿಗಳು ಎಷ್ಟು ಸಮರ್ಥರಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ನಾನು ಈ ಹಿಂದೆ ಮೈಸೂರು ಪರೇಡ್‌ಗೆ ಹೋಗಿದ್ದೆ. ನಿಮ್ಮ ಕಾರ್ಯಕ್ರಮದಲ್ಲಿ ಎಷ್ಟು ಸುಧಾರಣೆ ಕಂಡಿದೆ ಎಂದರೆ ರಾಷ್ಟ್ರಮಟ್ಟದ ಕಾರ್ಯಕ್ರಮಗಳ ರೀತಿ ನಡೆಯುತ್ತಿದೆ. ಪೊಲೀಸರ ಯಶಸ್ಸಿನಲ್ಲೇ, ನಾವು ಸರ್ಕಾರದ ಯಶಸ್ಸು ಕಾಣುತ್ತೇವೆ ಎಂದಿದ್ದಾರೆ.



