ರಾಜ್ಯಸುದ್ದಿ

ಅಯೋಧ್ಯ ರೈಲ್ವೆ ನಿಲ್ದಾಣದಲ್ಲಿ ಹುಬ್ಬಳ್ಳಿಗರ ಕೈಚಳಕ

ಅಯೋಧ್ಯೆಯಿಂದ ಲಂಕಾಗೆ ಹೋಗಲು ರಾಮನಿಗೆ ಹನುಮಾನ ಸೈನ್ಯದ ಜೊತೆಗೆ ಅಳಿಲು ಕೂಡ ಸೇತುವೆ ನಿರ್ಮಾಣ ಮಾಡಲು ಸಹಾಯ ಮಾಡಿದೆ. ಈ‌ ನಿಟ್ಟಿನಲ್ಲಿ ಅಯೋಧ್ಯೆಯ ರೈಲು ನಿಲ್ದಾಣಕ್ಕೆ ಮಹತ್ವದ ರೂಪ ನೀಡಲು ಹುಬ್ಬಳ್ಳಿಯ ಕಲಾವಿದರೂ‌ ಕೂಡ ಅಳಿಲು ಸೇವೆ ಮಾಡಿದ್ದಾರೆ.

ರಾವಣನ ಸಂಹಾರಕ್ಕೆ ಲಂಕೆಗೆ ಹೊರಟ ಶ್ರೀರಾಮನಿಗೆ ಸಮುದ್ರದ ಮೇಲೆ ಸೇತುವೆ ಕಟ್ಟಲು ಸಣ್ಣ ಅಳಿಲು ಸಹ ಸಹಾಯ ಮಾಡಿದೆ ಎಂಬ ಉಲ್ಲೇಖ ರಾಮಾಯಣದಲ್ಲಿದೆ. ಅದೇ ಅಳಿಲಿನ ಬೃಹದಾಕಾರದ ಕಲಾಕೃತಿಯನ್ನು ಅಯೋಧ್ಯೆ ಧಾಮ ಜಂಕ್ಷನ್‌ನಲ್ಲಿ (ರೈಲ್ವೆ ನಿಲ್ದಾಣ) ನಿರ್ಮಿಸಲಾಗಿದೆ.

5 ಕಲಾಕೃತಿಯನ್ನು ಆರ್ಟ್‌ವಾಲೇ ಹುಬ್ಬಳ್ಳಿಯ ಇನ್ಪಾಸ್ಟ್ರಕ್ಟರ್ ಸಂಸ್ಥೆ ನಿರ್ಮಿಸಿರುವುದು ಮತ್ತೊಂದು ವಿಶೇಷ.ಹೌದು.. ಹುಬ್ಬಳ್ಳಿ ಕೊಪ್ಪಿಕರ್ ರಸ್ತೆಯ ಆರ್ಟ್ ವಾಲೇ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ಓಸ್ತವಾಲ್ ಹಾಗೂ ಆರ್ಟ್ ಡೈರೆಕ್ಟರ್ ನಿಧಿ ಓಸ್ತವಾಲ್ ಅವರ ಮಾರ್ಗದರ್ಶನದಲ್ಲಿ ಈ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಕಲಾಕೃತಿ ನಿರ್ಮಾಣದ ಪ್ರಾಜೆಕ್ಟ್ ಮುಖ್ಯಸ್ಥ (ಆರ್ಕಿಟೆಕ್ಟ್) ಸನತ್ ಪಾಟೀಲ, ಕಿರಿಯ ಆರ್ಕಿಟೆಕ್ಟ್ ವಿನಯಕುಮಾರ ಕುಂಬಾರ ಸೇರಿದಂತೆ ಒಟ್ಟು 20 ಜನ ಸಿಬ್ಬಂದಿ ಕೇವಲ 35 ದಿನಗಳಲ್ಲಿ ಕಲಾಕೃತಿ ಸಿದ್ಧಪಡಿಸಿದ್ದಾರೆ. ಅದೂ‌ ಕೂಡ ಉಚಿತವಾಗಿ ಸೇವೆಯ ರೂಪದಲ್ಲಿ ಸಲ್ಲಿಸಿದ್ದಾರೆ.

ಇನ್ನೂ ಜಂಕ್ಷನ್‌ನ ಮುಖ್ಯ ದ್ವಾರದ ಬಳಿಯ ಎ-3 ಪ್ಯಾಸೇಜ್‌ನಲ್ಲಿ ಕ್ವಾರ್ಟನ್ ಸ್ಟೀಲ್ ನಲ್ಲಿ ಈ ಕಲಾಕೃತಿಯನ್ನು ಈಗಾಗಲೇ ಸ್ಥಾಪಿಸಲಾಗಿದೆ. ಅಳಿಲು ಒಟ್ಟು 19.5 ಅಡಿ ಎತ್ತರವಿದ್ದು, 2.5 ಟನ್ ತೂಕವಿದೆ. ಇದು ಭಾರತದ ಅತೀ ಎತ್ತರದ ಅಳಿಲಿನ ಕಲಾಕೃತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಅದರಂತೆ ರೈಲ್ವೆ ಜಂಕ್ಷನ್‌ನಲ್ಲಿ 40 ಅಡಿ ಎತ್ತರದ ಅಯೋಧ್ಯೆ ರಾಮ ಮಂದಿರ, 8.5 ಅಡಿ ಎತ್ತರದ ಅಯೋಧ್ಯೆ ಹಾಗೂ 9 ಅಡಿ ಎತ್ತರದ ನಾಮಫಲಕ ಹಾಗೂ 40 ಅಡಿ ಎತ್ತರದ ಸರಾಯು ನದಿ ಘಾಟ್ ಕಲಾಕೃತಿಗಳನ್ನು ಆರ್ಟ್‌ ವಾಲೇ ಸಂಸ್ಥೆ ನಿರ್ಮಿಸಿದೆ.

ಒಟ್ಟಿನಲ್ಲಿ ಅಯೋಧ್ಯೆಯ ಅಲಂಕಾರಕ್ಕೆ ಹುಬ್ಬಳ್ಳಿಯ ಕೊಡುಗೆ ಅವಿಸ್ಮರಣೀಯವಾಗಿದೆ. ಹುಬ್ಬಳ್ಳಿಯ ಕಲಾವಿದರ ಕೈಚಳಕ ಅಯೋಧ್ಯೆಯ ರಾಮನ ಮನಸ್ಸಿಗೆ ಮುದ ನೀಡುವಂತಾಗಿರುವುದು ಎಲ್ಲೆಡೆಯೂ ಪ್ರಶಂಸೆಗೆ ಪಾತ್ರವಾಗಿದೆ.

Comments (0)

Your email address will not be published. Required fields are marked *

Back to top button