Top Newsಜಿಲ್ಲೆರಾಜಕೀಯರಾಜ್ಯಸುದ್ದಿ

ಬಳ್ಳಾರಿಯಲ್ಲಿ ಬಯಲಾಯ್ತು ಬೃಹತ್ ಗೊಬ್ಬರ ಮಾಫಿಯಾ; ಪೊಲೀಸರ ‘ಸರ್ಜಿಕಲ್ ಸ್ಟ್ರೈಕ್’!

ಬಳ್ಳಾರಿ : ಕೈಗಾರಿಕಾ ಪ್ರದೇಶದಲ್ಲಿ ರೈತರಿಗೆ ಸೇರಬೇಕಾದ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಬೃಹತ್ ಗೋಡೌನ್ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ದಾಳಿ ನಡೆಸಿದ್ದಾರೆ. ಎಡ್ವಿನ್ ಎಂಬುವವರಿಗೆ ಸೇರಿದ ಗೋಡೌನ್‌ನಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಚೀಲ ಯೂರಿಯಾ ಗೊಬ್ಬರವನ್ನು ಸಂಗ್ರಹಿಸಿಡಲಾಗಿತ್ತು. ಜೂನ್ ತಿಂಗಳ ಮುಂಗಾರು ಹಂಗಾಮಿನಲ್ಲಿ ಗೊಬ್ಬರಕ್ಕೆ ಬರಲಿರುವ ಭಾರೀ ಬೇಡಿಕೆಯನ್ನು ಬಳಸಿಕೊಂಡು, ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಈ ಹುನ್ನಾರ ನಡೆಸಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

ಪ್ರಸ್ತುತ ತುಂಗಭದ್ರಾ ಜಲಾಶಯದ ಗೇಟ್ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಬಳ್ಳಾರಿ ಭಾಗದಲ್ಲಿ ರೈತರು ಎರಡನೇ ಬೆಳೆಯನ್ನು ಹೆಚ್ಚಾಗಿ ಬೆಳೆದಿಲ್ಲ. ಹೀಗಿದ್ದರೂ, ಇಷ್ಟೊಂದು ಬೃಹತ್ ಪ್ರಮಾಣದ ಗೊಬ್ಬರ ಸಂಗ್ರಹವಾಗಿರುವುದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ತೀವ್ರ ಅಭಾವ ಸೃಷ್ಟಿಯಾಗಿದ್ದನ್ನು ಬಂಡವಾಳ ಮಾಡಿಕೊಂಡಿರುವ ಜಾಲ, ಈಗಿನಿಂದಲೇ ಸ್ಟಾಕ್ ಮಾಡುವ ಮೂಲಕ ಕೃತಕ ಅಭಾವ ಸೃಷ್ಟಿಸಲು ಮುಂದಾಗಿದೆ ಎಂದು ಆರೋಪಿಸಲಾಗಿದೆ.

ದಾಳಿಯ ವೇಳೆ ನಾಲ್ಕು ಸಾವಿರಕ್ಕೂ ಹೆಚ್ಚು ಚೀಲ ಯೂರಿಯಾವನ್ನು ವಶಪಡಿಸಿಕೊಂಡಿರುವ ಪೊಲೀಸರು, ಗೋಡೌನ್ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯು ಬಳ್ಳಾರಿ ಜಿಲ್ಲೆಯಲ್ಲಿ ಗೊಬ್ಬರ ಮಾಫಿಯಾ ಸಕ್ರಿಯವಾಗಿರುವುದನ್ನು ಪುಷ್ಠೀಕರಿಸಿದೆ. ಈ ಕುರಿತು ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಜಾಲದ ಹಿಂದಿರುವವರ ಪತ್ತೆಗಾಗಿ ತನಿಖೆ ಚುರುಕುಗೊಂಡಿದೆ.

Comments (0)

Your email address will not be published. Required fields are marked *

Back to top button