#Exclusive NewsTop Newsಸುದ್ದಿ

ಕಾಂಗ್ರೆಸ್-ಬಿಜೆಪಿಗಳಿಂದ ಪಂಚಮಸಾಲಿಗಳ ಪಕ್ಕೆಗೆ ಚೂರಿ..! ಬೆಳಗಾವೀಲಿ ರಕ್ತದೋಕುಳಿ..!

ಬೆಳಗಾವಿ: ಇಂದು ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಹೋರಾಟವನ್ನು ಸರ್ಕಾರವು ಬಗ್ಗು ಬಡಿದಿದೆ. ಪೊಲೀಸರು ಹೃದಯಹೀನರಂತೆ ವರ್ತಿಸಿ ಪಂಚಮಸಾಲಿಗಳ ಮೇಲೆ ಪೊಲೀಸರ ಅಟ್ಟಹಾಸ ಮೆರೆದಿದ್ದಾರೆ. ನ್ಯಾಯ ಕೇಳಿದ ಪಂಚಮಸಾಲಿ ಸಮುದಾಯಕ್ಕೆ  ಲಾಠಿ, ಬೂಟಿನೇಟು ಬಿದ್ದಿರುವುದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇದು ಮುಂದಿನ ದಿನಗಳಲ್ಲಿ ಹೋರಾಟದ ಕಾವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಗರಿಷ್ಠ ಶಾಸಕರನ್ನು ಗೆಲ್ಲಿಸಿ ಎರಡೂ ಪಕ್ಷಗಳಿಗೆ ಅಧಿಕಾರ ಕೊಟ್ಟಿರುವ ಪಂಚಮಸಾಲಿ ಸಮುದಾಯವು ಈಗ ಅಕ್ಷರಶಃ ತಬ್ಬಲಿಯಂತಾಗಿದೆ. ಈ ಸಮುದಾಯಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿದ್ದ ಅಧಿಕಾರ ಈವರೆಗೆ ಸಿಕ್ಕಿಲ್ಲ. ಅಧಿಕಾರ ಕೊಟ್ಟ ಪಂಚಮಸಾಲಿ ಸಮುದಾಯಕ್ಕೆ ಈವರೆಗೆ ಮಹಾಮೋಸ ನಡೆಯುತ್ತಲೇ ಬಂದಿದ್ದು, ಕಾಂಗ್ರೆಸ್​, ಬಿಜೆಪಿ ಎರಡೂ ಪಕ್ಷಗಳು ನಮ್ಮ ಪಕ್ಕೆಗೆ ಚೂರಿ ಇರಿದಿವೆ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.

ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅಲ್ಲಿ ಪಂಚಮಸಾಲಿಗಳ ಕೊಡುಗೆ ಇರುತ್ತೆ. ವೀರಶೈವ-ಲಿಂಗಾಯತರ ಪೈಕಿ ಶೇ.70ರಷ್ಟು ಪಂಚಮಸಾಲಿ ಮತದಾರರಿದ್ದಾರೆ. ಯಾರೇ ಸಿಎಂ ಆಗಲಿ ಅದು ಪಂಚಮಸಾಲಿಗಳ ಕೃಪಾಶೀರ್ವಾದ ಬೇಕೇ ಬೇಕು. ಸಮಾಜವನ್ನು ಮೆಟ್ಟಿಲು ಮಾಡಿಕೊಂಡ ಕೆಲ ರಾಜಕಾರಣಿಗಳು ಇದೀಗ ಅದೇ ಸಮಾಜವನ್ನು ತುಳಿಯುತ್ತಿದ್ದಾರೆ. ಕೆಲವರ ಅಧಿಕಾರದಾಹದಿಂದ ಪಂಚಮಸಾಲಿ ಸಮುದಾಯಕ್ಕೆ ಮಹಾಮೋಸವಾಗಿದೆ. ಒಂದೇ ಸಮಾಜದ 18-20 ಶಾಸಕರು ಗೆಲ್ಲುತ್ತಾರೆ. ಇವರ ಒಗ್ಗಟ್ಟನ್ನು ಒಡೆಯಲು ಕೆಲವು ರಾಜಕಾರಣಿಗಳು ತುದಿಗಾಲಲ್ಲಿ ಇರ್ತಾರೆ. ಉತ್ತರ ಕರ್ನಾಟಕದ ಪಂಚಮಸಾಲಿ ಮತಗಳಿಂದ ಸರ್ಕಾರ ರಚನೆಯಾಗುತ್ತದೆ. ಆದರೆ ದಕ್ಷಿಣ ಕರ್ನಾಟಕದ ಲಿಂಗಾಯತರು, ಒಕ್ಕಲಿಗರು, ಕುರುಬರಿಗೆ ಮಾತ್ರ ರಾಜಯೋಗ ಸಿಗುತ್ತಿದೆ. ಮೀಸಲಾತಿ ಕೇಳುವ ಸಮುದಾಯದ ಸದ್ದನ್ನು ಸರ್ಕಾರ ನಿರ್ದಯವಾಗಿ ಹತ್ತಿಕ್ಕುತ್ತೆ. ಹಾಗಾಗಿ ಉತ್ತರ ಕರ್ನಾಟಕದ ಪಂಚಮಸಾಲಿಗಳಿಗೆ ರಾಜಕೀಯ ನ್ಯಾಯ ಸಿಕ್ಕಿಲ್ಲ ಎಂದು ಹೋರಾಟಗಾರರು ಕಿಡಿಕಾರಿದ್ದಾರೆ.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಗೆ ಲಾಟರಿ..!

ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ಬಂಡೆದ್ದು ವರಿಷ್ಠರಿಂದಲೂ ನಿರೀಕ್ಷಿತ ಬೆಂಬಲ ಸಿಗದೆ ಕಂಗಾಲಾಗಿದ್ದ ಶಾಸಕ ಯತ್ನಾಳ್ ಅವರನ್ನು ಪಂಚಮಸಾಲಿ ಸಮುದಾಯ ಕೈ ಹಿಡಿದಿದೆ. ಯತ್ನಾಳ್ ನೇತೃತ್ವದ ಪಂಚಮಸಾಲಿ ಹೋರಾಟಕ್ಕೆ ಅಭೂತಪೂರ್ವ ಜಯ ಸಿಕ್ಕಿದೆ. ಸರ್ಕಾರದ ಲಾಠಿ, ಬೂಟಿಗೆ ಬಗ್ಗದೆ ಪಂಚಮಸಾಲಿ ಧೀರರು ಯತ್ನಾಳ್ ಬೆನ್ನಿಗೆ ನಿಂತಿದ್ದಾರೆ. ಪಂಚಮಸಾಲಿ ಹೋರಾಟದಲ್ಲಿ ವಿಜಯೇಂದ್ರ ವಿರುದ್ಧವೂ ಘೋಷಣೆಗಳು ಮೊಳಗಿವೆ. ವಿಜಯಾನಂದ ಕಾಶಪ್ಪನವರ್​ ಅವರನ್ನು ಬದಿಗೆ ಸರಿಸಿ ಯತ್ನಾಳ್​ ಗೆ ಉಘೇ.. ಉಘೇ ಎಂದಿದ್ದಾರೆ. ಸದ್ದಿಲ್ಲದೆ ಹೋರಾಟವನ್ನು ಕಟ್ಟಿದ ಮಾಜಿ ಸಚಿವ ಸಿ.ಸಿ.ಪಾಟೀಲ್​ ಹಾಗೂ ಅರವಿಂದ ಬೆಲ್ಲದ್​ ಅವರಿಗೂ ಹೋರಾಟಗಾರರು ಮಣೆ ಹಾಕಿರೋದು ಉತ್ತರ ಕರ್ನಾಟಕದಲ್ಲಿ ಹೊಸ ರಾಜಕೀಯ ಸಮೀಕರಣಕ್ಕೆ ನಾಂದಿ ಹಾಡುವ ಮುನ್ಸೂಚನೆ ನೀಡಿದೆ.

Comments (0)

Your email address will not be published. Required fields are marked *

Back to top button