#Exclusive NewsTop Newsಸುದ್ದಿ

ನಟ ದರ್ಶನ್​ಗೆ ಷರತ್ತುಬದ್ಧ ಜಾಮೀನು; 142 ದಿನಗಳ ಬಳಿಕ ಮಧ್ಯಂತರ ಜಾಮೀನು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 142 ದಿನಗಳ ಹಿಂದೆ ಜೈಲು ಸೇರಿದ್ದ ನಟ ದರ್ಶನ್‌ಗೆ ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಪಡೆಯಲು 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಬುಧವಾರ ಆದೇಶಿಸಿದೆ. ಇದರ ಬೆನ್ನಲ್ಲೇ ಅವರು ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿ ಬೆಂಗಳೂರಿಗೆ ಮಧ್ಯರಾತ್ರಿ ಬಂದಿದ್ದಾರೆ. ಪ್ರಕರಣ ಸಂಬಂಧ ಜಾಮೀನು ಕೋರಿ ನಟ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ, ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಬಳ್ಳಾರಿಯ ವೈದ್ಯಕೀಯ ಮತ್ತು ಸಂಶೋ ಧನಾ ಸಂಸ್ಥೆಯ (ಬಿಎಂಸಿಆರ್‌ಸಿ) ನ್ಯೂರೋ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಎಸ್.ವಿಶ್ವನಾಥ ಮತ್ತು ಫಿಸಿಯೋಥೆರಪಿಸ್ಟ್ ಎಂ.ವೆಂಕಟರೆಡ್ಡಿ ಅವರು ತಪಾಸಣೆ ನಡೆಸಿ ನೀಡಿರುವ ವರದಿ ಆಧರಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು, ದರ್ಶನ್‌ಗೆ 6 ವಾರಗಳ ಜಾಮೀನು ನೀಡಿದ್ದಾರೆ. ಹಾಗೆಯೇ, ದರ್ಶನ್ ತಮ್ಮದೇ ಖರ್ಚಿನಲ್ಲಿ ಬೆಂಗಳೂರಿನಲ್ಲಿ ಇಚ್ಚಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಆದೇಶಿಸಿದೆ. ಈ ಆದೇಶದಿಂದ ಬಂಧನಕ್ಕೆ ಒಳಗಾಗಿ 142 ದಿನ (ಸುಮಾರು ನಾಲ್ಕೂವರೆ ತಿಂಗಳ) ನಂತರ ದರ್ಶನ್ ಜೈಲಿಂದ ಬಿಡುಗಡೆಯಾಗಿದ್ದಾರೆ.

ಹಲವು ಷರತ್ತುಗಳು: ದರ್ಶನ್ 2 ಲಕ್ಷ ರು. ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು. ಬೆಂಗಳೂರಿನಲ್ಲಿ ತಮ್ಮ ಇಚ್ಛೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್‌ಗೆ ಕಲ್ಪಿಸಲಾಗಿದೆ. ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಮತ್ತು ಆ ಚಿಕಿತ್ಸೆಯ ಮುನ್ನೋಟವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.ದರ್ಶನ್ ತಮ್ಮ ಪಾಸ್ ಪೋರ್ಟ್ ಅನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇದು ಈ ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ. ಮಧ್ಯಂತರ ಜಾಮೀನು ಅವಧಿಯಲ್ಲಿ ದರ್ಶನ್  ವಿಚಾರಣಾಧೀನ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗುವಂತಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.ಸಾಕ್ಷ್ಯಗಳನ್ನು ತಿರುಚಬಾರದು.

 

Comments (0)

Your email address will not be published. Required fields are marked *

Back to top button