ಬೆಂಗಳೂರು: ಕೆಂಪೆಗೌಡರ ಎಲ್ಲಾ ಸ್ಮಾರಕಗಳನ್ನು ಪುನರುಜ್ಜೀವನಗೊಳಿಸಲು 103 ಕೋಟಿ ಹಾಗೂ ಕೆಂಪೇಗೌಡರ ಹೆಸರಿನಲ್ಲಿ ನಗರ ವಿನ್ಯಾಸ ಕಾಲೇಜು ಸ್ಥಾಪನೆಗೆ 100 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ಧಾರೆ..
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾಗಡಿ ಕೋಟೆಯ ಪುನರುಜ್ಜೀವನ ಕೆಲಸ ಶೇ. 50ರಷ್ಟು ಮುಗಿದಿದೆ. ಆಂತರಿಕ ಸಮನ್ವಯತೆ ಸಾಧಿಸಲು ಸಮಿತಿಯನ್ನು ರಚಿಸಲಾಗುವುದು. ಕೆಂಪೇಗೌಡರ ಸಮಾಧಿ ಸ್ಥಳದಲ್ಲಿ 10 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದು ಶೇ.90 ಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ಇದಕ್ಕೂ ಅನುದಾನವನ್ನು ಮೀಸಲಿಡಲಾಗಿದೆ ಎಂದರು.
ನಗರ ವಿನ್ಯಾಸ ಕಾಲೇಜಿನಲ್ಲಿ ಸುಮಾರು 300 ಜನ ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತೆ ನಾವು ಆಲೋಚನೆ ಮಾಡಿದ್ದೇವೆ. ಇದಕ್ಕಾಗಿ ವಿಟಿಯು ಅವರು ತಯಾರಿಸಿದ ಪಠ್ಯಕ್ರಮ ಅಳವಡಿಸಿಕೊಳ್ಳುವ ಸಂಬಂಧ ಅವರ ಜೊತೆ ಚರ್ಚೆ ನಡೆಸಲಾಗುವುದು. ಸುಮ್ಮನಹಳ್ಳಿಯ ಬಳಿ ಐದು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿರುವ ಕೆಂಪೇಗೌಡ ಭವನಕ್ಕೆ ಅತ್ಯುತ್ತಮ ಕಟ್ಟಡ ವಿನ್ಯಾಸವನ್ನು ನೀಡಲು ವಾಸ್ತುಶಿಲ್ಪಿಗಳಿಂದ ವಿನ್ಯಾಸ ನೀಡಲು ಆಹ್ವಾನ ನೀಡಲಾಗಿದೆ ಎಂದರು.
ನಗರ ವಿನ್ಯಾಸ ಅಧ್ಯಯನ ಮಾಡಿದವರಿಗೆ ಬಿಜಿಎ ಮತ್ತು ಪಾಲಿಕೆಗಳಲ್ಲಿ ಉದ್ಯೋಗ ನೀಡಬೇಕಿದೆ. ಏಕೆಂದರೆ ಬೆಂಗಳೂರಿಗೆ ನಗರ ವಿನ್ಯಾಸಕಾರರ ಅವಶ್ಯಕತೆ ಹೆಚ್ಚಿದೆ ಎಂದು ಹೇಳಿದ್ಧಾರೆ..


