ಬೆಂಗಳೂರು: ನಗರದಲ್ಲಿ ಕಿಟ್ಟಿ ಪಾರ್ಟಿಯಲ್ಲಿ ಪರಿಚಯವಾಗಿ ಸ್ನೇಹಿತೆಯರಿಗೆ ಕೋಟಿ ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಮಹಿಳೆಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯರಿಂದ 30 ಕೋಟಿ ಹೆಚ್ಚು ವಂಚನೆ ಮಾಡಿದ ಆರೋಪದಡಿ ಸವಿತಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಸವಿತಾ ನನಗೆ ಹಲವು ಪ್ರಮುಖ ರಾಜಕಾರಣಿಗಳು ಗೊತ್ತೆಂದು ಹೇಳಿಕೊಳ್ಳುತ್ತಿದ್ದಳು. ಸಿಎಂ, ಡಿಸಿಎಂ ಸೇರಿ ಹಲವು ಪ್ರಭಾವಿ ನಾಯಕರು ಪರಿಚಯವಿದ್ದಾರೆ ಎಂದು ಹೇಳಿ ಮಹಿಳೆಯರನ್ನು ನಂಬಿಸುತ್ತಿದ್ದಳು. ಬಳಿಕ ಅವರ ಬಳಿ ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ಹಣ ಪಡೆದು ಪಂಗನಾಮ ಹಾಕುತ್ತಿದ್ದಳು.
ಇಷ್ಟಕ್ಕೆ ಮುಗಿದಿಲ್ಲ ಆಕೆಯ ವಂಚನೆ ಜಾಲ. ಅಮೆರಿಕಾದಿಂದ ಕಡಿಮೆ ಬೆಲೆಯಲ್ಲಿ ಚಿನ್ನ ತಂದು ಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾಳೆ. ಹಿಂದೆ ನೊಂದ ಮಹಿಳೆಯಿಂದ ಗೋವಿಂದರಾಜನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಧನವಾಗಿ ಬೇಲ್ ಮೇಲೆ ಹೊರಗಡೆ ಬಂದಿದ್ದಳು. ಆದ್ರೂ ತನ್ನ ಹಳೆ ಚಾಲಿ ಬಿಡದ ಸವಿತಾ ಮತ್ತೆ ವಂಚನೆ ಮಾಡುವುದನ್ನು ಆರಂಭಿಸಿದ್ದಳು.. ಇದೀಗ ಬಸವೇಶ್ವರ ನಗರದ ಪೊಲೀಸರು ಸವಿತಾಳನ್ನು ಬಂಧಿಸಿದ್ದಾರೆ.


