
ಕರ್ನಾಟಕ ರಾಜ್ಯಸಭೆ ಚುನಾವಣೆ ರಂಗೇರಿದೆ. ಸಂಖ್ಯಾಬಲ ಇಲ್ಲದಿದ್ದರೂ ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಿದ್ದ ಎನ್ಡಿಎಗೆ ಸೋಲಿನ ಮುಖಭಂಗ ಎದುರಾಗುವುದು ಹೆಚ್ಚುಕಡಿಮೆ ಖಚಿತವಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರ ಮಾತುಗಳು ಕುಪೇಂದ್ರ ರೆಡ್ಡಿ ಸೋಲಿನ ಮುನ್ಸೂಚನೆಯನ್ನು ನೀಡಿವೆ.
ರಾಜ್ಯಸಭೆ ಚುನಾವಣೆ ಮತದಾನ ಬೆಳಗ್ಗೆ 9 ಗಂಟೆಗೆ ಶುರುವಾಗಿದ್ದು, ವೋಟಿಂಗ್ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ,
ನಮ್ಮ ಪಕ್ಷದ 19 ಶಾಸಕರ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ಕುಪೇಂದ್ರ ರೆಡ್ಡಿಯನ್ನು ಕಣಕ್ಕೆ ಇಳಿಸಿದ್ದೆವು. ಸೋಲು-ಗೆಲುವಿಗಾಗಿ ಅಲ್ಲ
ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮತದಾನ ಪೂರ್ಣಗೊಳ್ಳುವ ಮೊದಲೇ ಕುಪೇಂದ್ರ ರೆಡ್ಡಿ ಸೋಲುವ ಮುನ್ಸೂಚನೆಯನ್ನು ಕುಮಾರಸ್ವಾಮಿ ನೀಡಿದ್ದಾರೆ.
ವಿರೋಧ ಪಕ್ಷದ ನಾಯಕ ಅಶೋಕ್ ಮಾತುಗಳು ಸಹ ಪರೋಕ್ಷವಾಗಿ ಅದನ್ನೇ ಧ್ವನಿಸಿವೆ.
ನಮ್ಮ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ. ಜೆಡಿಎಸ್ ಅಭ್ಯರ್ಥಿ ಗೆಲ್ತಾರೆ ಅನ್ನೋದನ್ನು ನಿರೀಕ್ಷಿಸೋಣ
ಎಂದು ಅಶೋಕ್ ಹೇಳಿಕೆ ನೀಡಿದ್ದಾರೆ. ಅವರ ಮಾತುಗಳಲ್ಲಿ ಇಬ್ಬರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ವಿಶ್ವಾಸ ಕಂಡುಬರಲಿಲ್ಲ.




