
ಮಹಾರಾಷ್ಟ್ರ: ಬುಲ್ದಾನ ಜಿಲ್ಲೆಯಲ್ಲಿ ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲ್ಲಲು ನಡೆಸಿದ ಸರಣಿ ಸಂಚುಗಳು ಜಗತ್ತನ್ನೇ ಬೆಚ್ಚಿಬೀಳಿಸಿವೆ. ಆರೋಪಿ ಪ್ರಕಾಶ್ ಗವಾಂಡೆ ತನ್ನ ಪತ್ನಿ ವೈಶಾಳಿಯನ್ನು ಮುಗಿಸಲು ಸತತವಾಗಿ ಪ್ರಯತ್ನಿಸುತ್ತಲೇ ಇದ್ದನು. ಮಾರ್ಚ್ 2 ರಂದು ನಡೆದ ಈ ಘೋರ ಹತ್ಯೆ ಪ್ರಕರಣವು ಆರಂಭದಲ್ಲಿ ಸಾಮಾನ್ಯ ಅಪಘಾತದಂತೆ ಕಂಡರೂ, ಪೊಲೀಸರ ಚಾಣಾಕ್ಷ ತನಿಖೆಯಿಂದಾಗಿ ಈಗ ಕಿರಾತಕ ಗಂಡನ ಅಸಲಿ ಕ್ರೌರ್ಯ ಹೊರಬಂದಿದೆ.
ವೈಶಾಳಿಯನ್ನು ಕೊಲ್ಲಲು ಪ್ರಕಾಶ್ ಈ ಹಿಂದೆ ಮೂರು ಬಾರಿ ವಿಷ ನೀಡುವ ಮೂಲಕ ವಿಫಲ ಯತ್ನ ನಡೆಸಿದ್ದನು. ಆದರೆ ವಿಧಿಯಾಟ ಆಕೆ ಆ ಮೂರೂ ಬಾರಿಯೂ ಸಾವಿನ ದವಡೆಯಿಂದ ಪಾರಾಗಿದ್ದಳು. ಆದರೂ ಬಿಡದ ಈ ನೀಚ ಪತಿ, ನಾಲ್ಕನೇ ಬಾರಿ ಪಕ್ಕಾ ಸ್ಕೆಚ್ ರೂಪಿಸಿ ಆಕೆಯನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಈ ಬಾರಿ ಅಪಘಾತದ ರೂಪ ನೀಡಲು ನಿರ್ಧರಿಸಿದ ಪ್ರಕಾಶ್, ಮಂಗೇಶ್ ಎಂಬ ಹಿಟ್ಮ್ಯಾನ್ ಜೊತೆ ಒಂದು ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದನು.
ಘಟನೆಯ ದಿನ ವೈಶಾಳಿ ತನ್ನ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದಾಗ, ಸಂಚಿನಂತೆ ಬಂದ ಕಾರು ಆಕೆಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ವೈಶಾಳಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ, ಅಪಘಾತ ನಡೆದ ಸ್ಥಳದಲ್ಲಿ ಶಂಕಾಸ್ಪದವಾಗಿ ಓಡಾಡುತ್ತಿದ್ದ ಕಾರೊಂದರ ಮೇಲೆ ಅನುಮಾನ ವ್ಯಕ್ತವಾಯಿತು. ಆ ಕಾರಿನ ನಂಬರ್ ಪ್ಲೇಟ್ ಹಿಡಿದು ತನಿಖೆ ನಡೆಸಿದಾಗ ಸತ್ಯಾಂಶಗಳು ಒಂದೊಂದಾಗಿ ಬಯಲಿಗೆ ಬರಲಾರಂಭಿಸಿದವು.
ಕಾರು ಚಾಲಕ ಮಂಗೇಶ್ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಇದು ಕೇವಲ ಅಪಘಾತವಲ್ಲ, ಬದಲಿಗೆ ಪತಿ ಪ್ರಕಾಶ್ ನೀಡಿದ ಸುಪಾರಿ ಕೊಲೆ ಎಂಬ ಸ್ಪೋಟಕ ಸತ್ಯ ಹೊರಬಿದ್ದಿದೆ. ಕೌಟುಂಬಿಕ ಕಲಹವೇ ಈ ಮಹಾಕ್ರೌರ್ಯಕ್ಕೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದ್ದು, ಸದ್ಯ ಪೊಲೀಸರು ಆರೋಪಿ ಶಿಕ್ಷಕ ಮತ್ತು ಆತನಿಗೆ ಸಹಕರಿಸಿದ ಹಿಟ್ಮ್ಯಾನ್ನನ್ನು ಬಂಧಿಸಿದ್ದಾರೆ.




