ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಆಘಾತಕಾರಿ ಘಟನೆ ನಡೆದಿದೆ.
ಲಕ್ನೋದಿಂದ ದೆಹಲಿ ಮಾರ್ಗವಾಗಿ ಮೀರತ್‌ಗೆ ವಾಪಸ್ಸಾಗುತ್ತಿದ್ದ ರೈಲಿನ ಮೇಲೆ ಗುರುವಾರ ಮಧ್ಯಾಹ್ನ 3:30ರ ಸುಮಾರಿಗೆ ಹಾರ್ದೋಯ್ ಗ್ರಾಮದ ಸಮೀಪ ಈ ದಾಳಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಮೋಹನ್ ಭಾಗವತ್ ಅವರು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದ್ದು, ಕಲ್ಲು ತೂರಾಟದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸ್ ವಿಶೇಷ ತಂಡವು ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದೆ.
ಕಲ್ಲು ತೂರಾಟದ ಘಟನೆಯ ನಡುವೆಯೂ ಮೋಹನ್ ಭಾಗವತ್ ಅವರು ರಾತ್ರಿ 9 ಗಂಟೆಯ ಸುಮಾರಿಗೆ ಮೀರತ್ ರೈಲು ನಿಲ್ದಾಣವನ್ನು ತಲುಪಿದ್ದು, ಅಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಅವರನ್ನು ಸ್ವಾಗತಿಸಲಾಯಿತು. ಅಲ್ಲಿಂದ ಅವರು ನೇರವಾಗಿ ಶತಾಬ್ದಿ ನಗರದ ಮಾಧವ್ ಕುಂಜ್‌ಗೆ ತೆರಳಿದ್ದಾರೆ.
ಮೀರತ್‌ನಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವತ್ ಭಾಗವಹಿಸಲಿದ್ದು, ಕ್ರೀಡಾಪಟುಗಳು ಹಾಗೂ ಬುದ್ಧಿಜೀವಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ವಿವಿಐಪಿ ಭದ್ರತೆಯಿರುವ ರೈಲಿಗೇ ಕಲ್ಲು ಹೊಡೆದಿರುವುದು ರೈಲ್ವೆ ಇಲಾಖೆ ಹಾಗೂ ಭದ್ರತಾ ಸಂಸ್ಥೆಗಳಲ್ಲಿ ತೀವ್ರ ಆತಂಕ ಮೂಡಿಸಿದ್ದು, ಕಿಡಿಗೇಡಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.


