

ಹನೂರು: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ದೇವರ ದರ್ಶನಕ್ಕೆ ಭಕ್ತಾದಿಗಳ ದಂಡು ಸಾಗುತ್ತಿತ್ತು. ನಡೆದು ಹೋಗುತ್ತಿದ್ದ ನಾಗಮಲೆ ಹಾದಿಯಲ್ಲಿ ಚಿರತೆಯೊಂದು 10 ವರ್ಷದ ಬಾಲಕನ ಮೇಲೆ ಭೀಕರ ದಾಳಿ ನಡೆಸಿದ್ದು, ಹುಡುಗ ಅಸು ನೀಗಿದ್ದಾನೆ. ಇತ್ತೀಚೆಗೆ ಚಿರೆತೆಯಿಂದ ಸತ್ತ ವ್ಯಕ್ತಿಯ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಬಲಿಯಾಗಿದ್ದು ಜನರು ಆಕ್ರೋಶಭರಿತರಾಗಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ನಾಗಮಲೆಗೆ ತೆರಳುವ ಪಾದಯಾತ್ರೆಯನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿರ್ಬಂಧಿಸಿದೆ.
ತಾಯಿ ಕಣ್ಣ ಮುಂದೆಯೇ ಮಗನನ್ನ ಹೊತ್ತೊಯ್ದ ಚಿರತೆ!
ಬೆಂಗಳೂರು ಮೂಲದ ಹರ್ಷಿತ್ ಗೌಡ (10) ಮೃತಪಟ್ಟ ದುರ್ದೈವಿ. ಪೋಷಕರೊಂದಿಗೆ ನಾಗಮಲೆ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಹಠಾತ್ತನೆ ದಾಳಿ ಮಾಡಿದ ಚಿರತೆ,ತಾಯಿಯ ಕಣ್ಣ ಮುಂದೆಯೇ ಬಾಲಕನನ್ನು ಹೊತ್ತೊಯ್ದು ಸಾಯಿಸಿದೆ. ಬೆಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಎರಡನೇ ಚಿರತೆ ದಾಳಿ ಇದಾಗಿದ್ದು, ಭಕ್ತಾದಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.ಕೂಡಲೆ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಶಾಸಕ ಮಂಜುನಾಥ್ ಗೋಳಾಡುತ್ತಿದ್ದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ರೈತರ ಪ್ರತಿಭಟನೆ
ನಾಗಮಲೆ ಹಾದಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಈಗ ಚಿರತೆ ದಾಳಿಗೆ 10 ವರ್ಷದ ಬಾಲಕ ಬಲಿಯಾಗಿರುವವುದಕ್ಕೆ ರೈತರು ಅರಣ್ಯ ಇಲಾಖೆಯ ವಿರುದ್ಧ ಕಿಡಿಕಾರಿದ್ದಾರೆ. ಕೂಡಲೆ ಸ್ಥಳದಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು, ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ರೈತರ ಬೆಳೆ ಹಾನಿ ಮತ್ತು ಪ್ರಾಣಹಾನಿ ತಡೆಯಲು ಇಲಾಖೆ ವಿಫಲವಾಗಿದೆ ಎಂದು ಕಿಡಿಕಾರಿದರು.
ಡಿಸಿಎಫ್ ಸುರೇಂದ್ರ ಅವರ ಸ್ಪಷ್ಟನೆ
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಸುರೇಂದ್ರ ಅವರು ರೈತರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ವಿವರಿಸಿದರು. ಭಕ್ತರ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ನಾಗಮಲೆಗೆ ತೆರಳುವ ಮಾರ್ಗವನ್ನು ಬಂದ್ ಮಾಡಲಾಗಿದೆ ಎಂದರು.
ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಅರಣ್ಯ ಇಲಾಖೆ,ನಿಯಮದಂತೆ ಬಾಲಕನ ಕುಟುಂಬಕ್ಕೆ ಒಟ್ಟು 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.ಈಗಾಗಲೇ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಹಸ್ತಾಂತರಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಬಾಕಿ 15 ಲಕ್ಷ ರೂಪಾಯಿಯನ್ನು ನೀಡಲಾಗುವುದು.
ಮಾಸಿಕ ಪಿಂಚಣಿ: ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಮುಂದಿನ 5 ವರ್ಷಗಳ ಕಾಲ ಪ್ರತಿ ತಿಂಗಳು 4,000 ರೂಪಾಯಿ ಪಿಂಚಣಿ ಸೌಲಭ್ಯವನ್ನೂ ಇಲಾಖೆ ಘೋಷಿಸಿದೆ.
ನಾಗಮಲೆಗೆ ಹೋಗುವಾಗ ಕುಟುಂಬಸ್ಥರು ಎಂಟ್ರಿ ಟಿಕೆಟ್ ಪಡೆದಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಚಿರತೆ ದಾಳಿಯ ಭೀತಿ ಇರುವುದರಿಂದ ನಾಗಮಲೆ ಪಾದಚಾರಿ ಮಾರ್ಗವನ್ನು ಬಂದ್ ಮಾಡಲಾಗಿದೆ. ಚಿರತೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಚುರುಕುಗೊಳಿಸಲಾಗಿದ್ದು, ಭಕ್ತರು ಅರಣ್ಯ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ.
#MaleMahadeshwaraHills #LeopardAttack #Nagamale #Chamarajanagar #ForestDepartment #BreakingNews #FreedomTV #HarshithGowda #KarnatakaNews #WildlifeConflict




