
ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಕದನ ದೆಹಲಿ ಅಂಗಳ ತಲುಪಿರುವ ಬೆನ್ನಲ್ಲೇ, ಬೆಳಗಾವಿಯ ಪ್ರಭಾವಿ ನಾಯಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಇತ್ತೀಚಿನ ಹೇಳಿಕೆಯು ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸತೀಶ್ ಜಾರಕಿಹೊಳಿ , ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿಯ ನಡುವೆಯೇ ನೀಡಿರುವ ಹೇಳಿಕೆಯು ಹಲವು ರಾಜಕೀಯ ವಿಶ್ಲೇಷಣೆಗಳಿಗೆ ದಾರಿ ಮಾಡಿಕೊಟ್ಟಿದೆ.
“ಡಿ.ಕೆ. ಶಿವಕುಮಾರ್ ಅವರು ನಾಳೆಯೇ ಮುಖ್ಯಮಂತ್ರಿಯಾಗಲಿ, ನಮಗೆ ಯಾವುದೇ ತೊಂದರೆಯಿಲ್ಲ. ಎಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ” ಎಂಬ ಸತೀಶ್ ಜಾರಕಿಹೊಳಿ ಅವರ ಮಾತುಗಳು ರಾಜ್ಯ ರಾಜಕಾರಣದ ಸಮೀಕರಣಗಳು ಬದಲಾಗುತ್ತಿವೆಯೇ ಎಂಬ ಪ್ರಶ್ನೆ ಮೂಡಿಸಿವೆ. ದೆಹಲಿಗೆ ತೆರಳಿರುವ ಡಿ.ಕೆ.ಶಿ ಅವರ ಬೆನ್ನಲ್ಲೇ ಸತೀಶ್ ಅವರು ಈ ರೀತಿ ಪರೋಕ್ಷವಾಗಿ ಬೆಂಬಲ ಸೂಚಿಸಿರುವುದು ಅಥವಾ “ನೋಡಿಕೊಳ್ಳುತ್ತೇವೆ” ಎಂದು ಮಾರ್ಮಿಕವಾಗಿ ಹೇಳಿರುವುದು ಸಿದ್ದರಾಮಯ್ಯ ಬಣಕ್ಕೆ ಆಘಾತ ನೀಡಿದಂತಿದೆ.
ಇದರ ಜೊತೆಗೆ, “ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧ ಹೋರಾಡುವವರು ನಾವು” ಎಂಬ ಅವರ ಹೇಳಿಕೆಯು ಯಾರನ್ನು ಉದ್ದೇಶಿಸಿ ಎಂಬುದು ಕುತೂಹಲಕಾರಿಯಾಗಿದೆ. ಸಿದ್ದರಾಮಯ್ಯ ಅವರ ಪರಮಾಪ್ತರೆಂದೇ ಕರೆಯಲ್ಪಡುವ ಸಚಿವರು ಈ ರೀತಿ ಡಿ.ಕೆ. ಶಿವಕುಮಾರ್ ಪರವಾಗಿ ಮೃದು ಧೋರಣೆ ತಳೆದಿರುವುದು ಕಾಂಗ್ರೆಸ್‌ನಲ್ಲಿ ‘ಪವರ್ ಶಿಫ್ಟ್’ ಆಗುವ ಮುನ್ಸೂಚನೆಯೇ ಎಂಬ ಚರ್ಚೆಗಳು ಬಿರುಸಾಗಿವೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂಬ ಧಾಟಿಯಲ್ಲಿ ಅವರು ಮಾತನಾಡುತ್ತಿರುವುದು ಕುರ್ಚಿ ಕದನ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿರುವುದನ್ನು ಪುಷ್ಟೀಕರಿಸುತ್ತಿದೆ .




