ರಾಜ್ಯ

ಗಲಭೆ ಬೆನ್ನಲ್ಲೇ ಬಳ್ಳಾರಿಯಲ್ಲಿ IPS ಡಿಶುಂ ಡಿಶುಂ? ; IPS ವರ್ತಿಕಾ-ಹರ್ಷಾ ನಡುವೆ ಕೋಲ್ಡ್‌ ವಾರ್‌..?

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಶಾಸಕ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ-ಶ್ರೀರಾಮುಲು ಬೆಂಬಲಿಗರ ನಡುವೆ ನಡೆದ ಬ್ಯಾನರ್ ಗಲಭೆ ಮತ್ತು ಶೂಟೌಟ್ ಪ್ರಕರಣ ಈಗ ಪೊಲೀಸ್ ಇಲಾಖೆಯೊಳಗೆ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಐಜಿ ವರ್ಗಾವಣೆ ವಿಚಾರವಾಗಿ ಇಬ್ಬರು ಹಿರಿಯ ಅಧಿಕಾರಿಗಳ ನಡುವಿನ ಗುಪ್ತ ಸಮರ ಈಗ ಆಡಿಯೋ ಮತ್ತು ದೂರುಗಳ ಮೂಲಕ ಬಹಿರಂಗವಾಗಿದೆ.
ಬಳ್ಳಾರಿಯಲ್ಲಿ ನಡೆದ ಗಲಭೆ ಹಾಗೂ ರಾಜಶೇಖರ್ ಎಂಬುವವರ ಸಾವಿನ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದಡಿ ಆಗಿನ ಐಜಿ ವರ್ತಿಕಾ ಕಟಿಯಾರ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಅವರ ಜಾಗಕ್ಕೆ ನೂತನ ಐಜಿಯಾಗಿ ಡಾ. ಪಿ.ಎಸ್. ಹರ್ಷ ಅವರು ಅಧಿಕಾರ ವಹಿಸಿಕೊಂಡಿದ್ದರು.
ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ವರ್ತಿಕಾ ಕಟಿಯಾರ್ ಅವರು ಕೆಎಟಿ (KAT) ಮೊರೆ ಹೋಗಿದ್ದರು. ಅಲ್ಲಿ ವರ್ಗಾವಣೆಗೆ ತಡೆಯಾಜ್ಞೆ (Stay) ಸಿಕ್ಕಿದೆ ಎನ್ನಲಾಗಿದ್ದು, ಇದೇ ವಿಚಾರ ಈಗ ಗೊಂದಲಕ್ಕೆ ಕಾರಣವಾಗಿದೆ. ಐಜಿ ಕಚೇರಿಯ ನೌಕರ ಬಸವರಾಜ್ ಎಂಬುವವರಿಗೆ ವರ್ತಿಕಾ ಕಟಿಯಾರ್ ಅವರು ಕರೆ ಮಾಡಿ, “ನಾನು ವಾಪಸ್ ಬರ್ತೇನೆ, ಯಾವುದೇ ಪ್ರಮುಖ ಫೈಲ್‌ಗಳನ್ನು ಹೊಸ ಐಜಿಗೆ ಕೊಡಬೇಡಿ” ಎಂದು ಸೂಚನೆ ನೀಡಿದ್ದರು ಎನ್ನಲಾಗಿದೆ.

ಬಹಿರಂಗವಾಯ್ತು ನೌಕರನ ದೂರು ಮತ್ತು ಆಡಿಯೋ!
ಈ ಬೆಳವಣಿಗೆಯ ಬೆನ್ನಲ್ಲೇ ಕಚೇರಿ ನೌಕರ ಬಸವರಾಜ್, ಫೆಬ್ರವರಿ 4 ರಂದು ಈಗಿನ ಐಜಿಗೆ ಅಧಿಕೃತ ದೂರು ನೀಡಿದ್ದಾರೆ. ವರ್ತಿಕಾ ಕಟಿಯಾರ್ ಅವರು ನೀಡಿದ್ದ ಸೂಚನೆಯನ್ನು ರೆಕಾರ್ಡ್ ಮಾಡಿಕೊಂಡಿರುವ ಬಸವರಾಜ್, ಆ ವಿಡಿಯೋ ಜೊತೆಗೆ ದೂರು ನೀಡಿದ್ದಾರೆ. ಅದರ ಜೊತೆಗೆ ವರ್ತಿಕಾ ಕಟಿಯಾರ್‌ ಅವರಿಗೂ ಪತ್ರ ಬರೆದಿದ್ದು, “ನನಗೆ ಪದೇ ಪದೇ ಕರೆ ಮಾಡಬೇಡಿ, ಬೇರೆಯವರಿಂದಲೂ ಒತ್ತಡ ಹಾಕಿಸಬೇಡಿ” ಎಂದಿದ್ದಾರೆ.

ಐಜಿ ಹರ್ಷ ಅವರು ಅಧಿಕಾರ ವಹಿಸಿಕೊಂಡು ತಿಂಗಳು ಕಳೆಯುತ್ತಿದ್ದರೂ, ಒಳಗೊಳಗೆ ನಡೆಯುತ್ತಿದ್ದ ಈ ಜಟಾಪಟಿ ಈಗ ಹಾದಿರಂಪವಾಗಿದೆ. ಒಬ್ಬ ಹಿರಿಯ ಅಧಿಕಾರಿಯೇ ಕಚೇರಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವುದು ಪೊಲೀಸ್ ಇಲಾಖೆಯ ಘನತೆಗೆ ಕುಂದು ತಂದಿದೆ ಎಂದು ಆಂತರಿಕ ಮೂಲಗಳು ಬೇಸರ ವ್ಯಕ್ತಪಡಿಸಿವೆ.

Comments (0)

Your email address will not be published. Required fields are marked *

Back to top button