Top Newsಸುದ್ದಿ

ಬಿಡಿಎ ಕಾಂಪ್ಲೆಕ್ಸ್ ಉಳಿಸುವ ಹೋರಾಟಕ್ಕೆ ಎಎಪಿ ಬೆಂಬಲ-ಮೋಹನ್ ದಾಸರಿ

ಬೆಂಗಳೂರು: ‘ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿ’ ವತಿಯಿಂದ ಸೆಪ್ಟೆಂಬರ್ 12 ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕರೆಕೊಟ್ಟಿದ್ದು, ಈ ಪ್ರತಿಭಟನೆಗೆ ಆಮ್ ಆದ್ಮಿ ಪಾರ್ಟಿ ಸಂಪೂರ್ಣವಾಗಿ ಬೆಂಬಲ ನೀಡಲಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು, ನಾಯಕರು ಭಾಗಿಯಾಗಲಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಹೇಳಿದ್ದಾರೆ.

ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ದಾಸರಿ, ಸುಮಾರು ವರ್ಷಗಳಿಂದ ಇಂದಿರಾ ನಗರ ಮತ್ತು ಕೋರಮಂಗಲ ಭಾಗದಲ್ಲಿ ಬಿಡಿಎ ಕಾಂಪ್ಲೆಕ್ಸ್ ಖಾಸಗೀಕರಣದ ವಿರುದ್ಧ ಹೋರಾಟ ಮಾಡಿದ್ದೇವೆ. ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಆಮ್ ಆದ್ಮಿ ಪಾರ್ಟಿ ಮಾಡುತ್ತಿದೆ ಎಂದರು.

7 ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಸರ್ಕಾರ ಖಾಸಗೀಕರಣ ಮಾಡಲು ಹೊರಟಿದೆ. ಇದು ಖಾಸಗೀಕರಣ ಅಲ್ಲ ಲೀಸ್‌ಗೆ ನೀಡಲಾಗುತ್ತಿದೆ ಎಂದು ಅವರು ಹೇಳಬಹುದು, ಆದರೆ ಮೊದಲು 30 ವರ್ಷ ಲೀಸ್‌ಗೆ ಕೊಡುತ್ತಾರೆ, ಬಳಿಕ ಇನ್ನೂ 30 ವರ್ಷ ಎನ್ನುತ್ತಾರೆ. ಕೊನೆಗೆ 90, 120 ವರ್ಷ ಎಂದು ಕೊನೆಗೆ ಆ ಆಸ್ತಿಗಳನ್ನು ಖಾಸಗಿಯವರೇ ಖರೀದಿ ಮಾಡುತ್ತಾರೆ ಎಂದು ಮೋಹನ್ ದಾಸರಿ ಎಚ್ಚರಿಕೆ ನೀಡಿದರು.

ಕಾಂಪ್ಲೆಕ್ಸ್ ಕಟ್ಟಿದರೆ 70% ಖಾಸಗಿಯವರಿಗೆ ಮತ್ತು ಬಿಡಿಎಗೆ 30% ಭಾಗ ಕೊಡುತ್ತಾರೆ ಎಂದು ಹೇಳಿದ್ದಾರೆ. ಎಲ್ಲಾ ಬಿಡಿಎ ಕಾಂಪ್ಲೆಕ್ಸ್‌ಗಳು ಆಯಕಟ್ಟಿನ ಜಾಗದಲ್ಲಿದ್ದು ಸಾವಿರಾರು ಕೋಟಿ ಬೆಲೆ ಬಾಳುತ್ತವೆ. 7 ಬಿಡಿಎ ಕಾಂಪ್ಲೆಕ್ಸ್‌ಗಳ ಒಟ್ಟು ಮೌಲ್ಯ 20-25 ಸಾವಿರ ಕೋಟಿ ಆಗುತ್ತದೆ ಇಷ್ಟು ದುಡ್ಡನ್ನು ಲೂಟಿ ಮಾಡಲು ರಾಜಕಾರಣಿಗಳು ಮುಂದಾಗಿದ್ದಾರೆ ಎಂದರು.

ಇಂದಿರಾ ನಗರ ಬಿಡಿಎ ಕಾಂಪ್ಲೆಕ್ಸ್‌ ಅನ್ನು ಮೇವರಿಕ್ ಹೋಲ್ಡಿಂಗ್ಸ್ ಅವರಿಗೆ ನೀಡುತ್ತಾರಂತೆ. ಇದೇ ಮೇವರಿಕ್ ಹೋಲ್ಡಿಂಗ್ಸ್‌ನ ಗರುಡಾಚಾರ್ ಪಿಪಿಪಿ ಮಾದರಿಯಲ್ಲಿ ಗರುಡಾ ಮಾಲ್‌ ಕಟ್ಟಿ ಬಿಬಿಎಂಪಿಯನ್ನು ಮುಳುಗಿಸಿದ್ದಾರೆ. ಬಿಬಿಎಂಪಿಗೆ ಇವರು 60-70 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಇದೆ. ಇಂತಹವರಿಗೆ ಇದನ್ನು ಕೊಡಲು ಮುಂದಾಗಿದ್ದಾರೆ. ಇನ್ನುಳಿದ ಆರು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಎಂಫಾರ್ ಎನ್ನುವ ಕಂಪನಿಗೆ ಕೊಡಲು ನಿರ್ಧರಿಸಿದ್ದಾರೆ. ಈ ಕಂಪನಿ ಬಗ್ಗೆ ಅನೇಕ ಕಥೆಗಳಿವೆ, ಬಿಡಿಎ ಅಧ್ಯಕ್ಷ ಹ್ಯಾರಿಸ್ ಅವರ ಸಹಭಾಗಿತ್ವ ಇದೆ ಎಂದು ಹೇಳಲಾಗಿದೆ. ಇಬ್ಬರು ಮೂವರು ರಾಜಕಾರಣಿಗಳು ಒಟ್ಟಾಗಿ ಲೂಟಿ ಮಾಡಲು ಮುಂದಾಗಿದ್ದಾರೆ ಎಂದು ಮೋಹನ್ ದಾಸರಿ ವಾಗ್ದಾಳಿ ನಡೆಸಿದರು.

ನಿಮಗೆ ಬಿಡಿಎ ಕಾಂಪ್ಲೆಕ್ಸ್ ನೋಡಿಕೊಳ್ಳಲು ಆಗಲಿಲ್ಲ ಎಂದರೆ ಅವುಗಳನ್ನು ಉರುಳಿಸಿ ಪಾರ್ಕ್ ಮಾಡಿ. ಸ್ಥಳೀಯ ನಿವಾಸಿಗಳೇ ಅದನ್ನು ನೋಡಿಕೊಳ್ಳುತ್ತಾರೆ. ಇಂದು ಜಾಗ ಖರೀದಿ ಮಾಡಿ, ಆಸ್ಪತ್ರೆ, ಶಾಲೆ ಕಟ್ಟಲು ಆಗಲ್ಲ. ಸರ್ಕಾರಿ ಸ್ವತ್ತುಗಳು ಖಾಸಗಿಯವರ ಪಾಲಾಗಲು ಆಮ್ ಆದ್ಮಿ ಪಾರ್ಟಿ ಬಿಡಲ್ಲ ಎಂದು ಮೋಹನ್ ದಾಸರಿ ಎಚ್ಚರಿಕೆ ನೀಡಿದರು.

ಈ ಸಂದರ್ಭ ಪಕ್ಷದ ಮುಖಂಡರಾದ ಅನಿಲ್ ನಾಚಪ್ಪ , ವೀಣಾ ಸರ್ರಾವ್ ಉಪಸ್ಥಿತರಿದ್ದರು.

Comments (0)

Your email address will not be published. Required fields are marked *

Back to top button