Editorial

ಸಂಪಾದಕೀಯ…

ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ನಡೆಸಿದ ಲಾಗಾಯ್ತು, ಇಡೀ ಜಗತ್ತೇ ಇಂಧನ ಸಮಸ್ಯೆಗೆ ಕುತ್ತಿಗೆ ಕೊಟ್ಟು ಭಯದ ಕಣ್ಣಲ್ಲಿ ನಿಂತಿದೆ. ನಾವು ಇರಾನ್ ಪರ ನಿಂತರೆ ನಾಳೆ ಅಮೆರಿಕ-ಇಸ್ರೇಲ್ ಗೆದ್ದು ನಮ್ಮ ದಾರಿಗೆ ಅಡ್ಡ ಬರಬಹುದು ಎಂಬುದು ಮೋದಿ ಅವರ ಭಯ. ಇಸ್ರೇಲ್ ಪರ ನಿಂತರೆ ನಾಳೆ ಇರಾನ್-ಚೀನಾ-ರಷ್ಯಾ ಗೆದ್ದು ನಮಗೆ ತೊಂದರೆ ಕೊಡಬಹುದು ಎಂಬ ಆತಂಕವಿದೆ. ಅತ್ತ ದರಿ ಇತ್ತ ಪುಲಿ ಎಂದು ನಮ್ಮ ಪ್ರಧಾನಿ ಬ್ಯಾಲೆನ್ಸ್ ಮಾಡುತ್ತಿರುವಾಗ, ಕೆಲ ಮೀಡಿಯಾ ಮಂಗಗಳು, ಮೋದಿ ಅವರನ್ನು ಇವರ ಮನೆಯ ಪುಕ್ಕಟೆ ಕೂಲಿಯಾಳಿಗೆ ಗದರುವಂತೆ ಗದರುತ್ತಾ, ಅವನು ಇವನು ಎಂದು ಹಂಗಿಸುತ್ತಾ, “ಕಿತ್ತು ಹೋಗುವುದೇನಯ್ಯ ಸರ್ವಜ್ಞ” ಎಂಬಂತೆ ಅರಚುತ್ತಿರುವ ವಿಕಟ ದೃಶ್ಯ ನಮ್ಮ ಮುಂದಿದೆ. ಅಲ್ಲಿ ಮೋದಿ ಇರಲಿ, ಯಂಕ್ ನಾಣಿ ಸೀನರೇ ಇರಲಿ — ಇದಕ್ಕಿಂತ ಹೆಚ್ಚೇನೂ ಮಾಡಲು ಆಗದು ಎಂಬ ಸತ್ಯ ಗೊತ್ತಿದ್ದೂ ಚೇಷ್ಟೆ ಮಾಡುವ ಕಪಿಗಳಿಗೆ ಅವುಗಳದ್ದೇ ಕಾರಣಗಳಿರುತ್ತವೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಏನೋ ಹೇಳಲು ಹೋಗಿ ಏನೋ ಹೇಳಿಬಿಟ್ಟರು.  ಮರುದಿನ ಕ್ಲಾರಿಫಿಕೇಶನ್ ಕೊಟ್ಟರು. ಸುಪ್ರೀಂ ಕೋರ್ಟ್ ಜಡ್ಜ್ ಕ್ಲಾರಿಫಿಕೇಶನ್ ಕೊಟ್ಟರೆಂದರೆ ಪರೋಕ್ಷವಾಗಿ ಅದು ಕ್ಷಮೆಯಾಚನೆಯಷ್ಟೇ ಮಹತ್ವದ್ದು. ಆದರೆ ಅವರು ಬಳಸಿದ “ಕೆಲ ನಿರುದ್ಯೋಗಿಗಳು ಜಿರಳೆಗಳಂತೆ ಕಾಟ ಕೊಡುತ್ತಿದ್ದಾರೆ” ಎಂಬ ಮಾತಿನಲ್ಲಿ ನಿರುದ್ಯೋಗಿಗಳನ್ನು ಜಿರಳೆಗಳೆಂದು ಜರಿದಿದ್ದಾರೆ ಎಂಬ ಆಪಾದನೆಯನ್ನು ಎತ್ತಿಕೊಂಡು ರಾಷ್ಟ್ರವ್ಯಾಪಿ ಚಳವಳಿ ಹೂಡಿದೆ ಕಾಕ್ರೋಚ್ ಪಾಳೆಯ. ಅದರ ಎದೆಯಲ್ಲಿರುವುದು ಯುವಜನರ ಹತಾಶೆ, ವ್ಯವಸ್ಥೆಯ ಮೇಲಿನ ಜುಗುಪ್ಸೆ, ಸಮಸಮಾಜದ ತುಡಿತ ಅಷ್ಟೇ ಅಲ್ಲ — ಸಮಾಜಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂಬ ಹದಿಹರೆಯದ ತ್ಯಾಗ ಮತ್ತು ಆದರ್ಶ ಮನಸ್ಥಿತಿ.

ಭಾರತದಂತಹ ದೇಶಗಳಲ್ಲಿ ಆಡಳಿತಶಾಹಿ ಹಾಗೂ ಪಟ್ಟಭದ್ರರಿಂದ ಜನ ನಿತ್ಯ ನೋವಿನಲ್ಲಿ ಬದುಕುತ್ತಿದ್ದಾರೆ. ಅವರಿಗೆ ಬದಲಾವಣೆ ಬೇಕು. ಅವರನ್ನು ನರಕಕೂಪದಿಂದ ಕಾಪಾಡುವ ನಾಯಕರು ಬೇಕು. ಅದಕ್ಕಾಗಿ ಅವರು ಮೋದಿ ಬಂದರೂ ಜೈ ಅನ್ನುತ್ತಾರೆ, ಕೇಜ್ರಿವಾಲ್ ಬಂದರೂ ಸೈ ಎನ್ನುತ್ತಾರೆ. ಬುದ್ಧದೇವರನ್ನು ಬೀಳಿಸಿ ಬಂಗಾಳದಲ್ಲಿ ದೀದಿಯನ್ನು ಗೆಲ್ಲಿಸುತ್ತಾರೆ. ತಮಿಳುನಾಡಿನಲ್ಲಿ ನಟರನ್ನು, ಚಳವಳಿಗಾರರನ್ನು, ಕಡೆಗೆ ವಿಜಯ್ ಅವರನ್ನು ಹೆಗಲ ಮೇಲೆ ನಿಲ್ಲಿಸಿಕೊಳ್ಳುತ್ತಾರೆ. ಅರವತ್ತು ವರ್ಷ ಕಾಂಗ್ರೆಸ್ ಹೆಣ ಹೊತ್ತರೂ, ಬಂಗಾಳದಲ್ಲಿ ಮೂವತ್ತು ವರ್ಷ ಕಮ್ಯುನಿಸ್ಟರನ್ನು ಎದೆ ಮೇಲೆ ಕೂರಿಸಿಕೊಂಡರೂ, ಜನತಾ ಪರಿವಾರವನ್ನು ಅಧಿಕಾರದ ಪಲ್ಲಕ್ಕಿಯಲ್ಲಿ ಹೊತ್ತರೂ — ಈ ದೇಶದ ಸಾಮಾನ್ಯ ಜನರ ನೋವಿಗೆ ಮದ್ದು ಏನೂ ಆಗಲಿಲ್ಲ. 

ಹೀಗೆ ಹತಾಶೆಯಲ್ಲಿರುವ ಯುವಜನ ಕಾಕ್ರೋಚ್ ಚಳವಳಿ ಹಿಂದೆ ಬಿದ್ದಿದೆ. ಇದನ್ನು ಹಣಿಯಲು ಬಿಜೆಪಿ ಗದೆ ಹಿಡಿದಿದ್ದರೆ, ಇದರ ಅಲೆಯಲ್ಲಿ ತೇಲಲು ಕಾಂಗ್ರೆಸ್ ತಾನೇ ಕಾಕ್ರೋಚ್ ಎಂದು ಟೀ-ಶರ್ಟ್ ಹಾಕಿ ನಿಂತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಸಾಂಪ್ರದಾಯಿಕ ಪಕ್ಷಗಳು ವ್ಯವಸ್ಥೆ ಬದಲಿಸಲು ಮುಂದಾಗುವ ಯಾರನ್ನೇ ಹಣಿದು ಹೆಣ ಕೆಡವುತ್ತವೆ. ಇಂಥ ಸಂದರ್ಭದಲ್ಲಿ ಕಾಕ್ರೋಚ್‌ಗಳು ಮತ್ತು ಜೆನ್‌ ಜಿ ಗಳು ನಿಜ ವಿವೇಕದೊಂದಿಗೆ ಹೆಜ್ಜೆಯಿಡಬೇಕು.  ತಮ್ಮ ನಿಜ ನಾಯಕರಾಗುವ ಅರ್ಹತೆ ಯಾರಿಗಿದೆ ಎಂದು ಚಿಂತಿಸಬೇಕು. ತನಗೆ ಹಣವೂ ಬೇಡ, ಹೆಸರೂ ಬೇಡ, ಅಧಿಕಾರವೂ ಬೇಡ ಎಂದು ಮಹಾನಗರ ಬಿಟ್ಟು ಹಳ್ಳಿ ಸೇರಿ ಬಡತನದ ಬೇಗೆ ಎದುರಿಸುತ್ತಿರುವ ಪತ್ರಕರ್ತ ಲಕ್ಷ್ಮಣ ಹೂಗಾರ್ ಅವರಂಥವರತ್ತ  ನೋಡಬಹುದು.  ಏನೂ ಬೇಡ ಎಂದು ಕಾಡು ಸೇರಿರುವ ಇಂಥ ಹಲವರ ಕುತ್ತಿಗೆ ಪಟ್ಟಿ ಹಿಡಿದು ತಂದು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದರೆ, ಜೆನ್‌ಜಿ ಗಳ ಬೇಕು-ಬೇಡಗಳ ಬಗ್ಗೆ ಕನಿಷ್ಠ ಚರ್ಚೆಯಾದರೂ ಡೆಮಾಕ್ರಸಿಯ ಸೌಧದ ಅಂಗಳದಲ್ಲಿ ನಡೆಯಬಹುದೇನೋ?

Comments (0)

Your email address will not be published. Required fields are marked *

Back to top button