Thursday, February 12, 2026
15.8 C
Bengaluru
Google search engine
LIVE
ಮನೆ#Exclusive NewsTop Newsಅಂತರಜಾತಿ ವಿವಾಹ ಬೆಂಬಲಿಸಿದ್ದಕ್ಕೆ ಎಲೆಕ್ಟ್ರಿಷಿಯನ್ ಮೇಲೆ ಹಲ್ಲೆ;ಜಾತಿನಿಂದನೆ

ಅಂತರಜಾತಿ ವಿವಾಹ ಬೆಂಬಲಿಸಿದ್ದಕ್ಕೆ ಎಲೆಕ್ಟ್ರಿಷಿಯನ್ ಮೇಲೆ ಹಲ್ಲೆ;ಜಾತಿನಿಂದನೆ

ಮೈಸೂರು: ಹುಣಸೂರು ತಾಲೂಕಿನ ಕೊತ್ತೆಗಾಲ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಅಂತರಜಾತಿ ವಿವಾಹವಾದ ಕುಟುಂಬಕ್ಕೆ ನೆರವು ನೀಡಿದ ಕಾರಣಕ್ಕಾಗಿ ಎಲೆಕ್ಟ್ರಿಷಿಯನ್ ವೆಂಕಟೇಶ್ ನಾಯಕ್ ಎಂಬುವವರ ಮೇಲೆ ಹಲ್ಲೆ ಮತ್ತು ಜಾತಿನಿಂದನೆ ಮಾಡಲಾಗಿದೆ.

ವಸಂತ ಮತ್ತು ನಟನಾಯಕ ದಂಪತಿಯ ಪುತ್ರಿ ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಗ್ರಾಮದ ಕೆಲವು ಗುಂಪುಗಳು ಆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದವು. ಈ ಬಹಿಷ್ಕಾರಕ್ಕೆ ಒಳಗಾದವರಿಗೆ ವೆಂಕಟೇಶ್ ನಾಯಕ್ ಬೆಂಬಲ ನೀಡಿದ್ದರು ಎಂಬ ಕಾರಣಕ್ಕೆ ಅವರ ವಿರುದ್ಧವೂ ಗ್ರಾಮದ ಕೆಲವರು ದ್ವೇಷ ಸಾಧಿಸಿದ್ದಾರೆ.

ವಿದ್ಯುತ್ ರಿಪೇರಿ ಕೆಲಸಕ್ಕಾಗಿ ವೆಂಕಟೇಶ್ ನಾಯಕ್ ಅವರು ವಿದ್ಯುತ್ ಕಂಬವನ್ನು ಪರಿಶೀಲಿಸುತ್ತಿದ್ದಾಗ, ರತ್ನಾಕರ, ರವಿ ಮತ್ತು ಕೆಲವು ಮಹಿಳೆಯರು ಅಡ್ಡಿಪಡಿಸಿದ್ದಾರೆ. “ಬಹಿಷ್ಕಾರಕ್ಕೆ ಒಳಗಾದ ನೀನು ಕಂಬ ಮುಟ್ಟುವಂತಿಲ್ಲ” ಎಂದು ಜಾತಿನಿಂದನೆ ಮಾಡಿ, ವೆಂಕಟೇಶ್ ನಾಯಕ್ ಮತ್ತು ಅವರ ಮಗನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಧುನಿಕ ಯುಗದಲ್ಲೂ ಇಂತಹ ಸಾಮಾಜಿಕ ಅನಿಷ್ಟಗಳು ಜೀವಂತವಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಯ ಕುರಿತು ವೆಂಕಟೇಶ್ ನಾಯಕ್ ಅವರು ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಅಧಿಕಾರಿಗಳು ಈಗಾಗಲೇ ಗ್ರಾಮಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments