ಸಂಪಾದಕೀಯ..

ಪ್ರಿಯ ಓದುಗರೇ,
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಬೈ-ಎಲೆಕ್ಷನ್ ರಣಕಣ ರಂಗೇರಿದೆ.. ಶಾಮನೂರು ಶಿವಶಂಕರಪ್ಪ ಅವರು ಆಳಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅವರ ಮೊಮ್ಮಗ ಸಮರ್ಥ್ ಶಾಮನೂರು ಸ್ಪರ್ಧಿ. ಬಾಗಲಕೋಟೆಯಲ್ಲಿ ಮಾಜಿ ಮಂತ್ರಿ ಎಚ್.ವೈ. ಮೇಟಿ ಅವರ ಮಗ ಉಮೇಶ್ ಮೇಟಿ ಕಾಂಗ್ರೆಸ್ ಅಭ್ಯರ್ಥಿ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಕುಟುಂಬ ರಾಜಕಾರಣದ ದಂತಕಥೆಗೆ ಮತ್ತೊಮ್ಮೆ ಮೊರೆ ಹೋಗಿದೆ. “ನನ್ನ ನಂತರ ನಿಮಗೆ” ಎಂಬ ಶಾಮನೂರು ಮಾತು ನಂಬಿ ಕಣ್ಣು ಮುಚ್ಚಿದ್ದ ಮುಸ್ಲಿಂ ಸಮುದಾಯ ಈಗ “ಲಬೋ” ಎಂದು ಕೈಚೆಲ್ಲುತ್ತಿದೆ. ಸಾದಿಕ್ ಪೈಲ್ವಾನ್ ಉಲ್ಟಾ ಹೊಡೆದರು. ಜಮೀರ್ ಅಹಮದ್ ಖಾನ್ ಸೈಲೆಂಟ್ ಆದರು. ಜಮೀರ್ ಅವರನ್ನು ಸೈಡ್ಲೈನ್ ಮಾಡಿ, ಕಾರ್ಯಾಧ್ಯಕ್ಷ ಸಲಿಂ ಅಹಮದ್, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರನ್ನು ಮುಂದಕ್ಕೆ ತಂದು ಸಾಧಿಕ್ ಅವರನ್ನು ಹಿಮ್ಮೆಟ್ಟಿಸಲಾಗಿದೆ. ಪಾಪ ಜಮೀರ್ ಅವರ ಸ್ಥಿತಿ ಅಸಹಾಯಕ. ಓವೈಸಿ ಪಕ್ಷದ ಸದ್ದೇ ಇಲ್ಲ. ಎಸ್ಡಿಪಿಐ ಸ್ಪರ್ಧೆ ಸಿಂಬಾಲಿಕ್ ಆಗಿ ಮುಗಿಯುವುದೋ ಎಂದು ನೋಡಬೇಕು. ಸ್ವತಂತ್ರ ಅಭ್ಯರ್ಥಿಯಾಗಿ ಶಿಕಾರಿಗೆ ನಿಂತ ಸಿಎಂ ಇಬ್ರಾಹಿಂ ಅವರು ಯಾವಾಗಲೋ “ಮುಸ್ಲಿಂ ನಾಯಕ” ಪೋಸ್ಟ್ ನಿಂದ ನಿವೃತ್ತರಾಗಿದ್ದಾರೆ. ಸಮರ್ಥ್ ಇರುವವರೆಗೆ ಮುಸ್ಲಿಮರಿಗೆ ಇಲ್ಲಿ ರಾಜಕೀಯ ಪ್ರಾತಿನಿಧ್ಯವೆಂದರೆ ಕೇವಲ ಮರೀಚಿಕೆಯೇ ಸರಿ. ಎಲ್ಲ ಮುಸ್ಲಿಮರು ಒಗ್ಗಟ್ಟಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸಾದಿಕ್ ಅವರನ್ನೇ ನಿಲ್ಲಿಸಿ ಗೆಲ್ಲಿಸಿದ್ದರೆ ಇತಿಹಾಸ ಸೃಷ್ಟಿಯಾಗುತ್ತಿತ್ತು. ಆದರೆ ಇಂಥ ಇತಿಹಾಸ ಸೃಷ್ಟಿಗೆ ಮುಸ್ಲಿಂ ಸಮುದಾಯಕ್ಕೆ ಅವಕಾಶ ಕೊಡುವ ಸಹನೆ ಕಾಂಗ್ರೆಸ್ ಹೈಕಮಾಂಡ್ಗೆ ಇಲ್ಲ. ನೀರ್ ಸಾಬ್ ಸಿಎಂ ಆಗಲಿಲ್ಲ. ಯಾಹ್ಯಾ ದಡ ಮುಟ್ಟಲಿಲ್ಲ. ರೈಲ್ವೇ ಮಂತ್ರಿಯಾಗಿದ್ದ ಜಾಫರ್ ಸಾಬ್ ಬೆಳೆಯಲಿಲ್ಲ. ತನ್ವೀರ್ ಸೇಠ್ ಅವರ ತಂದೆಯ ರಾಜಕೀಯ ಬರ್ಕತ್ತಾಗಲಿಲ್ಲ. ಹೀಗಿರುವಾಗ ಪಾಪ ಜಮೀರ್, ಸಲೀಂ ಅವರನ್ನು ಬೆಳೆಸುವವರು ಯಾರು? ಸ್ಪೀಕರ್ ಖಾದರ್ ಅವರ “ಸಾಫ್ಟ್ ಹಿಂದುತ್ವ” ಫಲ ಕೊಟ್ಟರೂ ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಬೇಕಲ್ಲವೇ?
ಇತ್ತ ಬೈ-ಎಲೆಕ್ಷನ್ ಕಣದಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠ ಗೆಲುವಿನ ಹುಕಿಯಲ್ಲಿದ್ದಾರೆ. ಆ ಕ್ರೆಡಿಟ್ ತಮಗೆ ಸಿಗಬಹುದು ಎಂದು ವಿಜಯೇಂದ್ರ ಬಣ ಬೆವರು ಹರಿಸುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್, ಪ್ರದೀಪ್ ಈಶ್ವರ್, ಸಿಎಂ ಇಬ್ರಾಹಿಂ ಅವರುಗಳು ತಮ್ಮ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ತರಾವರಿ ವೇಷ ಹಾಕಿ ನರ್ತಿಸುತ್ತಿದ್ದಾರೆ. ಇವರ ನರ್ತನ ಒಂದು ಕಡೆಯಾದರೆ, ಸಿದ್ದು-ಡಿಕೆ ಘಟಾನುಘಟಿಗಳ ಲೆಕ್ಕ ಬೇರೆಯದೇ. “ಎರಡೂ ಕ್ಷೇತ್ರಗಳು ಗೆದ್ದರೆ ನಾನು ಸೇಫ್” ಎಂದು ಸಿದ್ದು ಅಂದುಕೊಂಡಿದ್ದರೆ, “ಎರಡೂ ಗೆದ್ದರೆ ನನಗೆ ರಾಜಯೋಗ ಬರಬಹುದು” ಎಂದು ಡಿಕೆ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಈ ಬೈ-ಎಲೆಕ್ಷನ್ ರಣಕಣವು ಕುಟುಂಬ ರಾಜಕಾರಣದ ಅನಿವಾರ್ಯತೆಯನ್ನು ಪಕ್ಷಗಳಿಗೆ ಸಾಬೀತುಪಡಿಸಿದೆ. ಸಾಮಾನ್ಯ ಕಾರ್ಯಕರ್ತರು, ಅಲ್ಪಸಂಖ್ಯಾತ ಜಾತಿ-ಧರ್ಮಿಷ್ಠರು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಮುಳ್ಳುಗಳ ಮೇಲೆ ನಡೆಯುವ ವಾಸ್ತವವನ್ನು ನಮಗೆ ತೋರಿಸಿದೆ. ಕುಟುಂಬ ರಾಜಕಾರಣದ ಈ ದಂತಕಥೆಗಳು ಮುಂದುವರಿದರೆ ಪ್ರಜಾಪ್ರಭುತ್ವದ ಗತಿಯೇನು..?

